ಕೆರೂರಿನಲ್ಲಿನ ಕೋಮುಸಂಘರ್ಷಕ್ಕೆ ಇಬ್ಬರ ಜಗಳ ಕಾರಣ?
ಬಾಗಲಕೋಟೆ, ಜುಲೈ 8 : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರ ಪಟ್ಟಣದಲ್ಲಿ ಇಬ್ಬರ ನಡುವಿನ ವೈಯಕ್ತಿಕ ಜಗಳ ಕೋಮು ಸಂಘರ್ಷಕ್ಕೆ ಕಾರಣವಾಗಿದೆ?. ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ಕೋಮು ದಳ್ಳುರಿಗೆ ಕಾರಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕಟ್ಟಿಮನಿ ಹಾಗೂ ಆತನ ಸಹೋದರ ಲಕ್ಷ್ಮಣ ಕಟ್ಟಿಮನಿ ಹಾಗೂ ಮತ್ತೋರ್ವ ಯಮನೂರ ಚುಂಗಾರಿ ಮೇಲೆ ಎಳನೀರು ಕೊಚ್ಚುವ ಮಚ್ಚಿನಿಂದ ಹಲ್ಲೆ ಮಾಡಿದ್ದರು.
ಕೆರೂರ ಬಸ್ ನಿಲ್ದಾಣದ ಮುಂಭಾಗ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಇದರಿಂದ ಕೆರೂರ ಪಟ್ಟಣದಲ್ಲಿ ಉದ್ವಿಗ್ನ ವತಾವಾರಣ ನಿರ್ಮಾಣವಾಗಿದೆ. ಹಲ್ಲೆಯ ಘಟನೆ ನಂತರ ಬಸ್ ನಿಲ್ದಾಣದಿಂದ ಕೆರೂರ ತರಕಾರಿ ಮಾರುಕಟ್ಟೆಗೂ ಈ ಗಲಭೆ ಹಬ್ಬಿತ್ತು.
ಕೆಲ ಕಿಡಿಗೇಡಿಗಳು ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಿದ್ದರು. ತಳ್ಳುಗಾಡಿಗಳು ಹಾಗೂ ನಾಲ್ಕೈದು ಬೈಕ್‌ಗಳಿಗೆ ಬೆಂಕಿಯನ್ನು ಹಚ್ಚಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಡೀ ಕೆರೂರ ಸಂಜೆ ವೇಳೆಗೆ ಬೇರೆಯ ರೂಪ ತಾಳಿತು. 55 ವರ್ಷದ ಬಂದೇ ನವಾಜ್ ಎಂಬಾತನ ಮೇಲೆ ಹಲ್ಲೆಯೂ ನಡೆಯಿತು. ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಹುಡುಗಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ
ಹಲ್ಲೆಗೊಳಗಾದ ಅರುಣ್ ಕಟ್ಟಿಮನಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಕೆರೂರು ಪಟ್ಟಣದಲ್ಲಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಏನೇ ಸಮಸ್ಯೆಗಳಾದರೂ ಅರುಣ್ ಮುಂದಾಳತ್ವ ವಹಿಸುತ್ತಾರೆ. ಅದರಂತೆ ಬುಧವಾರವೂ ಕಾಲೇಜಿಗೆ ತೆರಳುವ ಹುಡುಗಿಯರಿಗೆ ಚುಡಾಯಿಸಿದ ಕಾರಣಕ್ಕೆ ಯಾಸಿನ್ ಎಂಬಾತನಿಗೆ ಮೂರ್ನಾಲ್ಕು ಜನ ಸೇರಿ ಹೊಡೆದು, ಬುದ್ದಿವಾದ ಹೇಳಿದ್ದರು.
ಆದರೆ ಸಂಜೆ ವೇಳೆಗೆ ಬಸ್ ನಿಲ್ದಾಣದ ಮುಂಭಾಗ ಸಿಕ್ಕ ಅರುಣ್ ಮೇಲೆ, ಯಾಸಿನ್ ತಾಯಿ ಹಾಗೂ ಅನ್ಯ ಕೋಮಿನ ಹತ್ತಕ್ಕೂ ಹೆಚ್ಚು ಜನ ಹಲ್ಲೆ ನಡೆಸಿದ್ದಾರೆ. ಈ ಘಟನೆ ಕೋಮುದಳ್ಳುರಿಗೆ ತಿರುಗಿತ್ತು. ಇದರಿಂದ ಪರಿಸ್ಥಿತಿ ನಿಯಂತ್ರಿಸಲು ಕೆಎಸ್‌ಆರ್‌ಪಿ, ಡಿಎಆರ್, ಅಗ್ನಿ ಶಾಮಕ ಸಿಬ್ಬಂದಿ, 5 ಐಆರ್‌ಬಿ ತುಕುಡಿ ನಿಯೋಜನೆ ಮಾಡಲಾಗಿತ್ತು

ಎರಡೂ ಕೋಮಿನ ನಾಲ್ಕು ಜನರಿಗೆ ಗಾಯ
ಗಲಭೆಯಲ್ಲಿ ಗಾಯಗೊಂಡ ಅರುಣ್ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಹಾಗೂ ಯಮನೂರು ಚುಂಗಾರಿಯನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಗುಂಪು ಘರ್ಷಣೆಯಲ್ಲಿ ಎರಡೂ ಕೋಮಿನ ನಾಲ್ಕು ಜನ ಗಾಯಗೊಂಡಿದ್ದು ಎಲ್ಲರ ಆರೋಗ್ಯವು ಸ್ಥಿರವಾಗಿದೆ.
ಇನ್ನು ಘಟನೆ ಕುರಿತು ಅರುಣ್ ಪೋಷಕರು ನೋವು ವ್ಯಕ್ತಪಡಿಸಿದ್ದು, ನನ್ನ ಮಗನ ಕೊಲೆ ಮಾಡಲು ಸಂಚು ರೂಪಿಸಿದ್ದರು. ದೇವರ ಕೃಪೆಯಿಂದ ನನ್ನ ಮಗ ಉಳಿದಿದ್ದಾನೆ. ಹಲ್ಲೆ ಮಾಡಿದವರ ಪಾಪ ಅವರೇ ಅನುಭವಿಸಲಿ, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಆಗಲಿ ಎಂದರು ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ 144 ಸೆಕ್ಷನ್ ಜಾರಿ
ಕೆರೂರ ಪಟ್ಟಣದ ಘರ್ಷಣೆ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ತಕ್ಷಣ ಗುಂಪು ಚದುರಿಸುವ ಕೆಲಸ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆ ಅರಿತು ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕೆರೂರ ಪಟ್ಟಣ ಹೊತ್ತಿ ಉರಿಯೋಕೆ ಪ್ರಮುಖ ಕಾರಣ ಇಬ್ಬರ ನಡುವಿನ ಹಳೆ ವೈಷಮ್ಯ ಹಾಗೂ ಹುಡುಗಿಯರಿಗೆ ಚುಡಾಯಿಸಿರುವುದು ಎಂಬ ಮಾಹಿತಿ ಸಿಕ್ಕಿದೆ.

ನಾಲ್ಕು ಪ್ರಕರಣಗಳು ದಾಖಲು
ಸದ್ಯ ಕೆರೂರ ಪಟ್ಟಣದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಬಾರದು. ಸಾಮಾಜಿಕ ಜಾಲಾತಾಣದಲ್ಲಿ ಯಾವುದೇ ಪೋಸ್ಟ್ ಹಾಕಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 5 ಜನರನ್ನ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾದ 15 ಕ್ಕೂ ಜನರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಸಹ ಘೋಷಣೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ಕೆರೂರು ಠಾಣೆಯಲ್ಲಿ ದಾಖಲಾಗಿವೆ ಎಂದು ಘಟನೆ ಕುರಿತು ಎಸ್‌ಪಿ ಮಾಹಿತಿ ನೀಡಿದರು.












Click it and Unblock the Notifications