'ಮುತ್ತಣ್ಣ ಬೆಣ್ಣೂರ ಹೇಳಿಕೆಯಿಂದ ಕಾಂಗ್ರೆಸ್ ಮುಖಂಡರಿಗೆ ಮುಜುಗರ'
ಬಾಗಲಕೋಟೆ, ಮೇ 25 : ಕಾಶಪ್ಪನವರ ಸೋಲಿಗೆ ಅವರ ದುರ್ನಡತೆ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಬೆಣ್ಣೂರ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಹುನಗುಂದ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯದರ್ಶಿ ಬಸವರಾಜ ಹೊಸಮನಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಾದಿಗರು ಕಾಂಗ್ರೆಸ್ ಬೆಂಬಲಿಸಬಾರದೆಂದು ಬೆಣ್ಣೂರವರು ಪಕ್ಷದ ಜವಾಬ್ದಾರಿಯುತ ವ್ಯಕ್ತಿಯಾಗಿ ಹೇಳಿಕೆ ನೀಡಿರುವುದು ಜಿಲ್ಲೆಯ ವಿಧಾನಸಭಾ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ.
ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಧಕ್ಕೆಯುಂಟಾಗಿ, ಕಾರ್ಯಕರ್ತರು, ಮುಖಂಡರು ಮುಜುಗುರ ಪಡುವಂತಾಗಿದೆ ಎಂದು ಆರೋಪಿಸಿದರು.

ಮುಧೋಳ ಕ್ಷೇತ್ರದಲ್ಲಿ ಆರ್.ಬಿ.ತಿಮ್ಮಾಪುರ ಅವರಿಗೆ ಟಿಕೆಟ್ ಬೇಡ, ತಮಗೆ ನೀಡಬೇಕು ಎಂದು ಆಗ್ರಹಿಸಿ ಅಲ್ಲಿಯೂ ಮಾದಿಗ ಸಮಾಜದ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ ಈಗ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುವುದು ಎಷ್ಟು ಸಮಂಜಸ. ಡೋಂಗಿ ನಾಟಕ ಮಾಡುವ ಇಂಥವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು.
ಬಾದಾಮಿ ಚುನಾವಣೆ ನೆಪದಲ್ಲಿ ಹುನಗುಂದ ವಿಧಾನಸಭಾ ಮತ ಕ್ಷೇತ್ರದ ಮಾಜಿ ಶಾಸಕರು ವಿಜಯಾನಂದ ಕಾಶಪ್ಪನವರ ಪರವಾಗಿ ಪ್ರಚಾರ ಮಾಡದೇ ತಂತ್ರಗಾರಿಕೆ ಮಾಡಿ ಕಾಶಪ್ಪನವರ ಸೋಲಿಗೆ ಕಾರಣರಾದರು ಎಂದು ದೂರಿದರು.












Click it and Unblock the Notifications