ಇಳಕಲ್ ನಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಿದ ಶಿಕ್ಷಕ
ಬಾಗಲಕೋಟೆ, ಆಗಸ್ಟ್.31: ಜಿಲ್ಲೆಯಲ್ಲಿ ನಗರ, ಪಟ್ಟಣ ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನ ನಡೆಯುತ್ತಿದ್ದು, ಶಾಲಾ ಶಿಕ್ಷಕರೊಬ್ಬರು ನಗರ ಸಭೆ ಅಭ್ಯರ್ಥಿ ಪರವಾಗಿ ಮತದಾನ ಮಾಡುವಂತೆ ಹಣ ನೀಡಿ ಆಮಿಷ ಒಡ್ಡುತ್ತಿರುವ ವೀಡಿಯೋ ಬಹಿರಂಗವಾಗಿದೆ.
ಇಳಕಲ್ ಪಟ್ಟಣದಲ್ಲಿ ನಡೆಯುತ್ತಿರುವ ನಗರಸಭೆ ಚುನಾವಣೆಯಲ್ಲಿ ಹಣದ ಆಮಿಷ ಒಡ್ಡಿ ಬಿಜೆಪಿ ಪರ ಮತದಾನ ಮಾಡುವಂತೆ ಹೇಳಲಾಗಿದೆ. ಶಿಕ್ಷಕ ಇಳಕಲ್ ಪಟ್ಟಣದ ಸಮೀಪ ಸಜ್ಜಲಗುಡ್ಡ ಪ್ರಾಥಮಿಕ ಶಾಲೆಯ ಸಂಗನಬಸಪ್ಪ ಲೆಕ್ಕಿಹಾಳ ಎಂದು ತಿಳಿದು ಬಂದಿದೆ.
ವಾರ್ಡ್ ನಂಬರ್ 13 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಂಜುನಾಥ ಶೆಟ್ಟರ್ ಎಂಬುವವರ ಪರವಾಗಿ ಮತ ನೀಡುವಂತೆ ಮನೆ ಮನೆ ತೆರಳಿ, ಮಹಿಳೆಯರಿಗೆ ಹಣ ನೀಡಿದ್ದು, ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಕೇಳಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಚುನಾವಣೆ ಅಧಿಕಾರಿಗಳಿಗೆ ದೂರು ನೀಡಿದ್ದು, ಚುನಾವಣಾಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದ ಹಿನ್ನಲೆಯಲ್ಲಿ ಆಕ್ರೋಶಗೊಂಡಿದ್ದಾರೆ.
ಈ ಮಾಹಿತಿ ತಿಳಿದ ತಕ್ಷಣ ಸಿಪಿಐ ಕರುಣೇಶಗೌಡ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆಗಾಗಿ ಹಣ ಕೊಟ್ಟಿರುವ ಶಿಕ್ಷಕ ಹಾಗೂ ಹಣ ಪಡೆದುಕೊಂಡ ಮಹಿಳೆಯರಿಗೆ ವಿಚಾರಣೆ ನಡೆಸಿ, ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications