ಮಳೆ, ಗಾಳಿ; ಬಾಳೆ, ಪಪ್ಪಾಯ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ
ಬಾಗಲಕೋಟೆ, ಜೂನ್ 5: ಶುಕ್ರವಾರ ಸುರಿದ ಗಾಳಿ ಸಹಿತ ಮಳೆಯಿಂದ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಬೆಳೆದು ನಿಂತಿದ್ದ ಬಾಳೆ , ಪಪ್ಪಾಯಿ ಮರಗಳು ಮುರಿದು ಬಿದ್ದಿದ್ದು ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಶುಕ್ರವಾರ ಸುರಿದ ಅಕಾಲಿಕವಾಗಿ ಸುರಿದ ಗಾಳಿ, ಮಳೆಗೆ ಸಾಲಾ ಶೂಲ ಮಾಡಿ ಲಕ್ಷಾಂತರ ಖರ್ಚು ಮಾಡಿದ್ದ ಬೆಳೆದಿದ್ದ ಬಂಗಾರದಂತಹ ಬೆಳೆ ನೆಲಸಮವಾಗಿವೆ. ಕಲಾದಗಿಯ ಫಕೀರಪ್ಪ ಎಂಬ ರೈತ ತನ್ನ 6 ಎಕರೆ ಜಮೀನನಲ್ಲಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ 5000 ಪಪ್ಪಾಯ ಗಿಡಗಳನ್ನು ನೆಟ್ಟಿದ್ದರು. ಹಗಲು ರಾತ್ರಿ ಕಷ್ಟಪಟ್ಟು ವ್ಯವಸಾಯ ಮಾಡಿದ್ದರಿಂದ ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಮಳೆರಾಯ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ್ದು, ರೈತ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ದಿಢೀರ್ ಮಳೆಗೆ 5 ಸಾವಿರ ಪಪ್ಪಾಯಿ ಗಿಡಗಳಲ್ಲಿ ಸುಮಾರು 2000-2500 ವರೆಗೂ ಗಿಡಗಳು ನೆಲಸಮವಾಗಿವೆ. ಒಂದು ಗಿಡಕ್ಕೆ ಅಂದಾಜು 60-70 ಕೆಜಿ ಹಣ್ಣು ಬರುತ್ತಿತ್ತು. ಆದರೀಗ ಭಾರೀ ಗಾಳಿ ಮಳೆಯಿಂದಾಗಿ 1500 ಟನ್‌ದಷ್ಟು ಪಪ್ಪಾಯಿ ಹಣ್ಣು ನಷ್ಟವಾಗಿದೆ.

ಸದ್ಯ ಕಟಾವಿಗೆ ಬಂದಿದ್ದ ಗಿಡದಲ್ಲಿದ್ದ 120 ಟನ್‌ದಷ್ಟು ಪಪ್ಪಾಯ ಗಾಳಿ ಮಳೆಗೆ ನೆಲಕ್ಕೆ ಉರುಳಿ ಬಿದ್ದಿವೆ. ಹೀಗಾಗಿ ತುಂಬಾ ಕಷ್ಟಪಟ್ಟು ಸಾಲ ಮಾಡಿ, 10 ಲಕ್ಷ ಖರ್ಚು ಮಾಡಿ ಬೆಳೆದಿದ್ಸ ಪಪ್ಪಾಯಿ ಬೆಳೆಯ ಸ್ಥಿತಿ ನೋಡ್ತಿದರೆ ಒಂದುಕ್ಷಣ ರೈತನ ಬದುಕೇ ನೆಲಕ್ಕೊರಗಿದ ಹಾಗಿದೆ.
ಇನ್ನು ಭಾರೀ ಗಾಳಿ ಹಿನ್ನೆಲೆ ನೆಲಕ್ಕೆ ಬಾಗಿರುವ ಕೆಲವೊಂದಿಷ್ಟು ಪಪ್ಪಾಯ ಗಿಡಗಳಿಗೆ ಕಂಬದ ಆಸರೆ ಕೊಟ್ಟು ನಿಲ್ಲಿಸಲಾಗಿದೆಯಾದರೂ , ಪಪ್ಪಾಯ ನಾಶದಿಂದ ಕಂಗಲಾಗಿ ದಿಕ್ಕು ತೋಚದಂತಾಗಿರುವ ರೈತ ಫಕೀರಪ್ಪ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.

ಮೂರು ಎಕರೆ ಬಾಳೆಗಿಡ ನಾಶ; ಕಲಾದಗಿ ಗ್ರಾಮದ ಫಕಿರಪ್ಪನ ಕಥೆ ಒಂದೆಡೆಯಾದರೆ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ವೆಂಕಟೇಶ ಪರ್ವತಗೌಡ ಎಂಬುವರಿಗೆ ಸೇರಿದ ಬಾಳೆ ಗಿಡಗಳು ಸಹ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ನೆಲಕಚ್ಚಿವೆ. ಕಣ್ಣಿಗೆ ಕುಕ್ಕುವಂತಿದ್ದ ಬಾಳೆ ತೋಟಕ್ಕೆ ಮಳೆರಾಯನ ವಕ್ರದೃಷ್ಟಿ ಬಿದ್ದು ನಾಶವಾಗಿವೆ.
ಮೂರು ಎಕರೆ ಸಂಪೂರ್ಣ ಜಮೀನಿನಲ್ಲಿ ಬಾಳೆ ಗಿಡಗಳನ್ನು ಬೆಳೆಯಲಾಗಿತ್ತು. ಗೊನೆ ಹೊತ್ತು ನಿಂತಿದ್ದ ಬಾಳೆ ಗಿಡಗಳು ಅಕ್ಷರಶಃ ನೆಲಸಮವಾಗಿವೆ. ಇದರಿಂದ ತೀವ್ರ ಸಂಕಷ್ಟಗೊಂಡ ಜಮೀನು ಮಾಲಿಕ ವೆಂಕಟೇಶ, ನಾಶವಾದ ಬಾಳೆ ಗಿಡಗಳ ನೋಡಿ ಮರುಕಪಡುತ್ತಿದ್ದಾರೆ. ಈ ಹಿಂದೆಯೂ ಕೂಡ ವೆಂಕಟೇಶ ಪಾಟೀಲ್‌ಗೆ ಸೇರಿದ್ದ ಕಬ್ಬು ನಾಶವಾಗಿತ್ತು. ಇದೀಗ ತೋಟಗಾರಿಕೆ ಬೆಳೆ ಬೆಳೆದು ಜೀವನ ಹಸನಾಗಿಸುವ ಕನಸು ಕಂಡ ವೆಂಕಟೇಶ ಅವರಿಗೆ ಮಳೆರಾಯನ ಅವಕೃಪೆಯಿಂದ ದಿಕ್ಕು ತೋಚದಂತಾಗಿದೆ.

ಒಟ್ಟಿನಲ್ಲಿ, ಲಕ್ಷಾಂತರ ಸಾಲ ಮಾಡಿ ಬೆಳೆದಿದ್ದ ಬಳೆ ಒಂದೇ ರಾತ್ರಿಗೆ ಸುರಿದ ಭಾರೀ ಗಾಳಿ ಮಳೆಗೆ ನಾಶವಾಗಿದ್ದು, ಈ ರೈತರ ಬದುಕು ಕೂಡ ಕೊಚ್ಚಿಹೋಗಿವಂತೆ ಮಾಡಿದೆ. ಬೆಳೆ ಕೈಗೆ ಬಂದಿದ್ದು ಬದುಕು ಹಸನಾದೀತು ಎಂದುಕೊಂಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಹೋಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರ ಈ ರೈತರ ಸಂಕಷ್ಟ ಪರಿಹರಿಸುವ ಕಾರ್ಯ ಮಾಡಬೇಕಿದೆ.












Click it and Unblock the Notifications