ಬಾಗಲಕೋಟೆ: ಮಗಳನ್ನು ರಕ್ಷಿಸಲು ಹೋದ ತಂದೆಯೂ ನೀರುಪಾಲು
ಬಾಗಲಕೋಟೆ, ಜುಲೈ.04: ಬೈಕ್ ನಿಂದ ಪುಟಿದು ನದಿಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ ಹಾಗೂ ಪುಟ್ಟ ಮಗಳು ಇಬ್ಬರೂ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
3 ವರ್ಷದ ಆನಮ್ ಹಾಗೂ 29 ವರ್ಷದ ದಸ್ತಗೀರ್ ಗೌಂಡಿ ಎಂಬುವರೇ ಮೃತ ದುರ್ದೈವಿಗಳು. ತಂದೆ ದಸ್ತಗೀರ್ ಗೌಂಡಿ, ಚಿಕ್ಕ ಗಲಗಲಿ ಗ್ರಾಮದ ಶಾಲೆಗೆ ಹೋಗಿ ಮಗಳನ್ನು ಕರೆದುಕೊಂಡು ಬೈಕ್ ನಲ್ಲಿ ಮನೆಗೆ ವಾಪಸ್ಸಾಗುವ ವೇಳೆ, ಈ ಘಟನೆ ನಡೆದಿದೆ.
ಬೈಕ್ ಸ್ವಲ್ಪ ವೇಗವಾಗಿ ಚಲಿಸುತ್ತಿದ್ದುದರಿಂದ ಬೈಕ್ ಮೇಲಿದ್ದ ಆನಮ್ ಪುಟಿದು ನೇರವಾಗಿ ಕೃಷ್ಣಾ ನದಿಯಲ್ಲಿ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ನದಿಗೆ ಹಾರಿದ ತಂದೆ ದಸ್ತಗೀರ್ ಸಹ ಮಗಳ ಜೊತೆ ನೀರುಪಾಲಾಗಿದ್ದಾರೆ.

ಸದ್ಯ ತಂದೆ-ಮಗಳ ಶವಗಳನ್ನು ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸೇತುವೆಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದಿರುವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಸ್.ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications