ಬಿಜೆಪಿಯ ಐದು ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ: ಆರ್.ಬಿ.ತಿಮ್ಮಾಪುರ
ಬಾಗಲಕೋಟೆ, ಜುಲೈ 02: ನಮ್ಮ ಐದು ಜನ ಶಾಸಕರು ರಾಜೀನಾಮೆ ಕೊಟ್ಟರೆ, ಬಿಜೆಪಿಯ ಐದು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ತಯಾರಾಗಿದ್ದಾರೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಭದ್ರವಾಗಿದೆ, ರಮೇಶ್ ಜಾರಕಿಹೊಳಿ ನಮ್ಮ ಜೊತೆಗೇ ಇರುತ್ತಾರೆ, ಆನಂದ್ ಸಿಂಗ್ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಮ್ಮಾಪುರ ಹೇಳಿದ್ದಾರೆ.
ನಮ್ಮ ಪಕ್ಷದ ಮುಖಂಡರು ರಮೇಶ್ ಜಾರಕಿಹೊಳಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ರಮೇಶ್ ಅವರು ಬಿಳಿ ಹಾಳೆ ಮೇಲೆ ರಾಜೀನಾಮೆ ಪತ್ರ ಬರೆದು ಕಳುಹಿಸಿದ್ದಾರೆ ಅಷ್ಟೆ ಅದು ಸ್ವೀಕೃತಿ ಆಗುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯ ಕೆಲ ಶಾಸಕರು ನಮ್ಮ ಜೊತೆಗೆ ಇದ್ದೇವೆ, ನಾವು ರಾಜಕಾರಣಿಗಳು, ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ನಾವೂ ರಾಜಕಾರಣ ಮಾಡುತ್ತೇವೆ ಎಂದರು.
ಇಂದು ಬೆಳಿಗ್ಗೆ ಡಿಸಿಎಂ ಪರಮೇಶ್ವರ್ ಅವರು ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರಲು ಕೆಲವು ಬಿಜೆಪಿ ಶಾಸಕರು ತಯಾರಾಗಿದ್ದು, ಸಮಯ ಬಂದಾಗ ಅವರನ್ನು ಕರೆದುಕೊಳ್ಳುತ್ತೇವೆ ಎಂದಿದ್ದರು. ಈಗ ಸಚಿವ ತಿಮ್ಮಾಪುರ ಸಹ ಇದೇ ಹೇಳಿಕೆ ನೀಡಿದ್ದು, ರಿವರ್ಸ್ ಆಪರೇಷನ್ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.











Click it and Unblock the Notifications