20 ರೂ.ಗೆ ಜಗಳ; ಗ್ರಾಹಕನ ಎದೆಗೆ ಕತ್ತರಿ ಚುಚ್ಚಿ ಹತ್ಯೆ ಮಾಡಿದ ಕ್ಷೌರಿಕ
ಬಾಗಲಕೋಟೆ, ಮೇ 27: ಸಲೂನ್‌ನಲ್ಲಿ ತಲೆಗೆ ಕಲರ್ ಹಚ್ಚುವ ದರದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್‌ನಲ್ಲಿ ಘಟನೆ ನಡೆದಿದ್ದು, ಕ್ಷೌರಿಕ ಕತ್ತರಿಯಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಗ್ರಾಹಕ ಸಾವನ್ನಪ್ಪಿದ್ದಾನೆ.
22 ವರ್ಷದ ಸಾಗರ ಅವಟಿ ಕ್ಷೌರಿಕನಿಂದ ಕೊಲೆಗೀಡಾಗಿರುವ ಯುವಕ ಎಂದು ತಿಳಿದುಬಂದಿದೆ. ಸದಾಶಿವ ನಾವಿ ಕೊಲೆ ಮಾಡಿದ ಯುವಕ ಕ್ಷೌರಿಕನಾಗಿದ್ದು ಆಸಂಗಿ ಗ್ರಾಮದಲ್ಲಿ ಪ್ರಜ್ವಲ್ ಜೆಂಟ್ಸ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ, ನಿನ್ನೆಸಂಜೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಲರ್ ಹಚ್ಚುವ ವಿಚಾರಕ್ಕೆ ಜಗಳ ಶುರು; ಗುರುವಾರ ಸಂಜೆ ಪ್ರಜ್ವಲ್ ಜೆಂಟ್ಸ್ ಪಾರ್ಲರ್‌ನಲ್ಲಿ ಸಾಗರ ಎಂಬ ಯುವಕ ತಲೆಗೆ ಕಲರ್ ಹಚ್ಚಿಸುವುದಕ್ಕೆ ಬಂದಿದ್ದ. ಸಲೂನ್ ಮಾಲೀಕ ಲಕ್ಷ್ಮಣ ಕೊಲೆಯಾದ ಸಾಗರ ತಲೆಗೆ ಕಲರ್ ಹಚ್ಚುವುದಕ್ಕೆ ಮುಂದಾಗಿದ್ದರು. ಕಲರ್ ಹಚ್ಚುವುದಕ್ಕೆ 20 ರೂಪಾಯಿ ಕೊಡುವುದಾಗಿ ಸಾಗರ ತಿಳಿಸಿದ್ದಾನೆ. ಈ ವೇಳೆ ಮತ್ತೊಬ್ಬ ಗ್ರಾಹಕನಿಗೆ ಕಟಿಂಗ್ ಮಾಡುತ್ತಿದ್ದ ಸದಾಶಿವ ನಾವಿ ಕೋಪಗೊಂಡು ಸಾಗರನೊಂದಿಗೆ ತಕರಾರು ತೆಗೆದಿದ್ದಾನೆ.

ಸಾಗರ ಕ್ಷೌರಿಕ ಯುವಕ ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ಗುರುವಾರ ಕೂಡ ಕೆಲ ಹೊತ್ತು ಕಾಡಿಸಿದ್ದನಂತೆ ಎಂದು ಹೇಳಲಾಗಿದ್ದು, ಸದಾಶಿವ ತನ್ನ ಹಳೆಯ ಕೋಪವನ್ನು ಮನದಲ್ಲಿಟ್ಟುಕೊಂಡು ಜಗಳಕ್ಕೆ ಇಳಿದಿದ್ದಾನೆ.
ಈ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ಸದಾಶಿವ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಸಾಗರನ ಎದೆ ಭಾಗಕ್ಕೆ ಚುಚ್ಚಿದ್ದಾನೆ. ಕೂಡಲೇ ಸಾಗರನನ್ನು ಅವಟಿಯ ಸಮೀಪದ ಜಮಖಂಡಿ ನಗರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಮುಗಿಲು ಮುಟ್ಟಿದ ಆಕ್ರಂದನ; ಕ್ಷುಲ್ಲಕ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಾಗರನ್ನು ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಸದಾಶಿವನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತಪಟ್ಟಿರುವ ಸಾಗರ ಉತ್ತಮ ಕಬ್ಬಡ್ಡಿ ಹಾಗೂ ಕ್ರಿಕೆಟ್ ಆಟಗಾರನಾಗಿದ್ದನು. ಈ ಘಟನೆಯಿಂದ ಇಡೀ ಆಸಂಗಿ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ. ಈ ಘಟನೆ ಕುಚೇಷ್ಟೆಯಲ್ಲಿ ತೊಡಗುವ ಗೆಳೆಯರಿಗೆ ಎಚ್ಚರಿಕೆಯಾಗಿದೆ.












Click it and Unblock the Notifications