ತೇರದಾಳದಲ್ಲಿ ಅಮಿತ್ ಶಾ ಬಹಿರಂಗ ಸಭೆ: ನೇಕಾರ ಮತದಾರರನ್ನುಸೆಳೆಯಲು ಚಾಣಕ್ಯನ ತಂತ್ರ
ಬಾಗಲಕೋಟೆ, ಏಪ್ರಿಲ್ 25: ನೇಕಾರ ಮತದಾರರೇ ನಿರ್ಣಾಯಕ ಆಗಿರುವ ತೇರದಾಳ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಂಗಳವಾರ ಬಹಿರಂಗ ಸಭೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಿದ್ದು ಸವದಿ ಪರ ಅಮಿತ್ ಶಾ ಮತಯಾಚನೆ ಮಾಡಿದ್ದಾರೆ.
ಸದ್ಯ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಶಾ ತೇರದಾಳ ಕ್ಷೇತ್ರಕ್ಕೆ ಆಗಮಿಸಿದ್ದು, ನೇಕಾರರ ಕೈ ಮಗ್ಗ ನೇಯುವ ಮೂಲಕ ಹಾಗೂ ಅಲ್ಲಮಪ್ರಭುವಿಗೆ ನಮಿಸುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಅಮಿತ್ ಶಾ ಬಹಿರಂಗ ಸಭೆ ನಡೆಸಿದ್ದು, ಈ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವ ಜಗಳಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಮುಖ್ಯಮಂತ್ರಿ ಯಾಗಬೇಕು ಎನ್ನುವ ಕಿತ್ತಾಟ ನಡೆಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ ವಿನಾಕಾರಣ ಏಕೆ ಜಗಳವಾಡುತ್ತಿರಿ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯ ವಾಡಿದ್ದಾರೆ.
ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಖನ್ನು ಗೆಲ್ಲಿಸಬೇಕಿದೆ ಎಂದು ಸಚಿವ ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಜಗದೀಶ ಗುಡಗುಂಟಿ, ಸಿದ್ದು ಸವದಿ ಅವರನ್ನು ವೇದಿಕೆ ಮುಂಭಾಗದಲ್ಲಿ ಕರೆದು ಅಮಿತ್ ಶಾ ಮತದಾರರಲ್ಲಿ ಮನವಿ ಮಾಡಿಕೊಂಡರು. ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಬೇಕಿದೆ. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಾಕಷ್ಟುಅನುದಾನ ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದರೆ ರಾಜ್ಯದ ಅಭಿವೃದ್ದಿ ರಿವರ್ಸ್ ಗೇರ್‌ನಲ್ಲಿ ಹೋಗುತ್ತದೆ ಎಂದು ಟೀಕಿಸಿದರು.

ಬಿಜೆಪಿ ಭದ್ರಕೋಟೆ ತೇರದಾಳ ಕ್ಷೇತ್ರ
2008ರಲ್ಲಿ ಹೊಸದಾಗಿ ರಚನೆಯಾದ ತೇರದಾಳ ಕ್ಷೇತ್ರ ಸದ್ಯ ಬಿಜೆಪಿ ಭದ್ರಕೋಟೆಯಾಗಿದೆ. ಈವರೆಗೆ ನಡೆದ ಮೂರು ಚುನಾವಣೆಯಲ್ಲಿ 2 ಸಲ ಬಿಜೆಪಿ ಗೆಲುವು ಸಾಧಿಸಿದೆ. ತೇರದಾಳ, ಬಾಗಲಕೋಟೆ, ಹುನಗುಂದ, ಬಾದಾಮಿ ಕ್ಷೇತ್ರಗಳಲ್ಲಿ ನೇಕಾರ ಮತದಾರರು ಅಧಿಕವಾಗಿದ್ದಾರೆ. ಅದರಲ್ಲೂ ತೇರದಾಳ ಕ್ಷೇತ್ರದಲ್ಲಿ ಗೆಲುವುನೇಕಾರ ಮತದಾರರಿಂದ ನಿರ್ಧಾರ ಆಗುತ್ತದೆ. ಹೀಗಾಗಿ ಈ ಬಾರಿ ನೇಕಾರ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಹಾಲಿ ಶಾಸಕ ಸಿದ್ದು ಸವದಿಗೆ ಮತ್ತೆ ಮಣೆ ಹಾಕಿದೆ.
ಸಿದ್ದು ಸವದಿಗೆ ಬಿಜೆಪಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡ ಟಿಕೆಟ್ ವಂಚಿತರರು ಕೆಲವರು ಪಕ್ಷ ತೊರೆದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸುವ ದೃಷ್ಠಿಯಿಂದ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ತೆರದಾಳ ಭೇಟಿ ನೀಡಿ ಸಿದ್ದು ಸವದಿ ಪರ ಮತಯಾಚನೆ ಮಾಡಿದ್ದಾರೆ.












Click it and Unblock the Notifications