ಬಾಗಲಕೋಟೆ; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಎಎಪಿ!
ಬಾಗಲಕೋಟೆ, ಮಾರ್ಚ್ 24: ಬಾಗಲಕೋಟೆ ಕ್ಷೇತ್ರದ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಪಕ್ಷ ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲಗೆ ಟಿಕೆಟ್ ನೀಡಿದೆ.
2ನೇ ಹಂತದಲ್ಲಿ ಮೇ 7ರಂದು ಬಾಗಲಕೋಟೆ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಬಿಜೆಪಿಯಿಂದ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ. ಸಿ. ಗದ್ದಿಗೌಡರ್ ಅಭ್ಯರ್ಥಿ.

ವೀಣಾ ಕಾಶಪ್ಪನವರ್, ಸಂಯಕ್ತ ಪಾಟೀಲ್ ಬಾಗಲಕೋಟೆ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಸಂಯುಕ್ತ ಪಾಟೀಲ್ ಟಿಕೆಟ್ ಪಡೆದಿದ್ದು, ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಎಎಪಿಯಿಂದ ಬೆಂಬಲ ಘೋಷಣೆ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲಗೆ ಆಮ್ ಆದ್ಮಿ ಪಕ್ಷ ಬೆಂಬಲವನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಿದೆ.
ಎಎಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಆನಂದ್ ದೇವಾಡಿಗ ಅವರು ಬಾದಾಮಿಯಲ್ಲಿ ಸಂಯುಕ್ತ ಪಾಟೀಲ ಭೇಟಿ ಮಾಡಿ ಬಾಗಲಕೋಟ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಎಎಪಿಯ ಪ್ರಭಾವ ಅಷ್ಟಕಷ್ಟೆ ಎಂಬುದು ಎಲ್ಲರಿಗೂ ತಿಳಿದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು. ಎಎಪಿಯ ಬೆಂಬಲದಿಂದ ಚುನಾವಣಾ ಚಿತ್ರಣದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬ ಯಾವುದೇ ನಿರೀಕ್ಷೆ ಬೇಡ.
ಸಂಯುಕ್ತ ಪಾಟೀಲ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ವೀಣಾ ಕಾಶಪ್ಪನವರ್, "ನನ್ನ ಅಕ್ಕನಂತೆ ಅವರನ್ನೂ ಜೊತೆಯಾಗಿಯೇ ಚುನಾವಣೆ ಎದುರಿಸುತ್ತೇನೆ" ಎಂದು ಹೇಳಿದ್ದಾರೆ. ವೀಣಾ ಕಾಶಪ್ಪನವರ್ ಟಿಕೆಟ್ ತಪ್ಪಿದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕಣ್ಣೀರು ಹಾಕಿದ್ದರು. ಬಾಗಲಕೋಟೆಯಲ್ಲಿ ಅಭಿಮಾನಿಗಳ ಸಭೆಯನ್ನೂ ಸಹ ನಡೆಸಿದ್ದಾರೆ.
ವೀಣಾ ಕಾಶಪ್ಪನವರ್ 2019ರ ಚುನಾವಣೆಯಲ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 496,451 ಮತಗಳನ್ನು ಪಡೆದು ಬಿಜೆಪಿಯ ಪಿ. ಸಿ. ಗದ್ದಿಗೌಡರ್‌ಗೆ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ 664,638 ಮತಗಳನ್ನು ಪಡೆದ ಗದ್ದಿಗೌಡರ್ ಗೆಲುವು ಸಾಧಿಸಿದ್ದರು.
ಈ ಬಾರಿ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಪಕ್ಷದ ಹೈಕಮಾಂಡ್ ಸಂಯುಕ್ತ ಪಾಟೀಲ್‌ಗೆ ಅವಕಾಶ ನೀಡಿದೆ. ವೀಣಾ ಕಾಶಪ್ಪನವರ್ ಮತ್ತು ಅವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ್ ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಸಂಯುಕ್ತ ಪಾಟೀಲ್ ಗೆಲುವಿನ ಹಾದಿ ಸುಲಭವೇನು ಆಗಿಲ್ಲ.
2014ರ ಚುನಾವಣೆಯಲ್ಲಿ ಬಿಜೆಪಿಯ ಪಿ. ಸಿ. ಗದ್ದಿಗೌಡರ್ 571,548 ಮತಗಳನ್ನು ಪಡೆದು ಬಾಗಲಕೋಟೆಯಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಅಜಯ್ ಕುಮಾರ್ ಸರ್ ನಾಯಕ್ 454,988 ಮತಗಳನ್ನು ಪಡೆದು 2ನೇ ಸ್ಥಾನವನ್ನು ಪಡೆದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಶಂಕರ ಬಿದರಿ ಕಣಕ್ಕಿಳಿದು 10,959 ಮತಗಳನ್ನು ಪಡೆದಿದ್ದರು.
2009ರ ಚುನಾವಣೆಯಲ್ಲಿ ಪಿ. ಸಿ. ಗದ್ದಿಗೌಡರ್ 413,272 ಮತಗಳನ್ನು ಪಡೆದು ಕಾಂಗ್ರೆಸ್‌ನ ಜೆ. ಟಿ. ಪಾಟೀಲ್ (377,826 ಮತ) ಸೋಲಿಸಿದ್ದರು. ಕಾಂಗ್ರೆಸ್ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರತಿ ಬಾರಿಯೂ ಅಭ್ಯರ್ಥಿಯನ್ನು ಬದಲಾವಣೆ ಮಾಡುತ್ತಲೇ ಬಂದಿದೆ. ಆದರೆ ಗೆಲವು ಮಾತ್ರ ಸಿಕ್ಕಿಲ್ಲ.
ಈ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ಸೇರಿ ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡಿದೆ. ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ, ಬಾದಾಮಿ ಹಾಗೂ ಹುನಗುಂದ ಮತ್ತು ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಸೇರಿ ಒಟ್ಟು 17,90,118 ಮತದಾರರು ಇದ್ದಾರೆ.












Click it and Unblock the Notifications