ಆಂಧ್ರದಲ್ಲಿ ವಿಚಿತ್ರ ಕಾಯಿಲೆ ಪತ್ತೆ; ಆಸ್ಪತ್ರೆ ಸೇರಿದ 200 ಜನ!
ಅಮರಾವತಿ, ಡಿಸೆಂಬರ್ 07: ಕೋವಿಡ್ ಸೋಂಕಿನ ಭೀತಿ ಇನ್ನೂ ಇರುವಾಗಲೇ ಆಂಧ್ರ ಪ್ರದೇಶದಲ್ಲಿ ವಿಚಿತ್ರ ಕಾಯಿಲೆಯೊಂದು ಪತ್ತೆಯಾಗಿದೆ. ಇದುವರೆಗೂ 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿ ಬಂದಿದೆ.
ಆಂಧ್ರ ಪ್ರದೇಶ ರಾಜ್ಯದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾಗಿದೆ. ಮೂರ್ಛೆರೋಗ ಹೋಲುವಂತಹ ಸಮಸ್ಯೆಯಿಂದ ಜನರು ನರಳಾಡಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಶನಿವಾರದಿಂದ ಈ ವಿಚಿತ್ರ ರೋಗ ಪತ್ತೆಯಾಗಿದೆ. 46 ಮಕ್ಕಳು, 76 ಮಹಿಳೆಯರೂ ಸೇರಿದಂತೆ ಇದುವರೆಗೂ 292 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಜನರು ಸಹ ಆತಂಕಗೊಂಡಿದ್ದಾರೆ.

ಶನಿವಾರ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಯಾವ ರೋಗದ ಲಕ್ಷಣಗಳು ಕಂಡುಬಂದಿಲ್ಲ. ನೀರಿನಿಂದಾಗಿ ಈ ರೋಗ ಬಂದಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
ವಿಜಯವಾಡದ ಸರ್ಕಾರಿ ಆಸ್ಪತ್ರೆಯಲ್ಲಿ 50 ಜನರು ಮತ್ತು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ 60 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 90 ಜನರನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಯಾವ ಲಕ್ಷಣಗಳು ಕಂಡು ಬಂದಿವೆ
* ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರ ಪ್ರದೇಶದಲ್ಲಿ ಮಾತ್ರ ಈ ರೋಗ ಪತ್ತೆಯಾಗಿದೆ.
* ಮೈ-ಕೈ ನೋವು, ತಲೆ ನೋವು ಕಾಣಿಸಿಕೊಂಡ ವ್ಯಕ್ತಿಗಳು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ.
* ಇಂತಹ ಲಕ್ಷಣ ಕಂಡು ಬಂದ ಜನರು ಒಂದೇ ಪ್ರದೇಶವರಲ್ಲ. ಎಲ್ಲರೂ ಸಂಬಂಧಿಕರು ಸಹ ಅಲ್ಲ
* ಪ್ರಜ್ಞೆ ಕಳೆದುಕೊಂಡ ಜನರು 10 ರಿಂದ 15 ನಿಮಿಷದಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ.
* ಜನರ ರಕ್ತದ ಮಾದರಿಗಳ ಪರೀಕ್ಷೆ ವರದಿಯಲ್ಲಿ ಯಾವುದೇ ರೋಗ ಪತ್ತೆಯಾಗಿಲ್ಲ.
* ಎಲ್ಲಾ ಜನರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
* ರೋಗ ಪತ್ತೆಯಾದ ಪ್ರದೇಶದ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ.












Click it and Unblock the Notifications