ತಿರುಪತಿ: ವಿಐಪಿ ದರ್ಶನ ರದ್ದು ನಿರ್ಧಾರಕ್ಕೆ ಹೈಕೋರ್ಟ್ ತಡೆ
ಅಮರಾವತಿ, ಜುಲೈ 15: ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಗೊಳಿಸುವ ಘೋಷಣೆಗೆ ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಟಿಟಿಡಿಯಲ್ಲಿ ಮೂರು ವರ್ಗದ ವಿಐಪಿ ದರ್ಶನ ವ್ಯವಸ್ಥೆಯನ್ನು ಅಂತ್ಯಗೊಳಿಸುವುದಾಗಿ ಟಿಟಿಡಿ ಮಂಡಳಿ ಅಧ್ಯಕ್ಷ ವೈಎಸ್ ಸುಬ್ಬಾರೆಡ್ಡಿ ಅವರು ಪ್ರಕಟಿಸಿದ್ದರು. ಆದರೆ, ಅದನ್ನು ಎತ್ತಿಹಿಡಿಯಲು ಹೈಕೋರ್ಟ್ ನಿರಾಕರಿಸಿದೆ.
ಈ ಪ್ರಕಟಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಟಿಟಿಡಿ ಮಂಡಳಿಗೆ ಸೂಚನೆ ನೀಡಿದೆ. ಅಲ್ಲದೆ, ಈ ಘೋಷಣೆ ವಿಚಾರದಲ್ಲಿ ವಿಚಾರಣೆ ಮುಂದುವರಿಸುವುದರ ಅಗತ್ಯವೇನಿದೆ ಎಂಬುದಕ್ಕೆ ಸೂಕ್ತ ಕಾರಣ ಒದಗಿಸುವಂತೆಯೂ ನಿರ್ದೇಶಿಸಿದೆ.

ಆಂಧ್ರಪ್ರದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆ ಬಳಿಕ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು. ಆಗ ಟಿಟಿಡಿ ಮುಖ್ಯಸ್ಥರನ್ನು ತೆಗೆದುಹಾಕಿ ಜಗನ್ ಮೋಹನ್ ರೆಡ್ಡಿ ಅವರ ಸಂಬಂಧಿ ವೈಎಸ್ ಸುಬ್ಬಾರೆಡ್ಡಿ ಅವರನ್ನು ಸರ್ಕಾರ ನೇಮಿಸಿತ್ತು. ಈ ಬೆಳವಣಿಗೆ ಬಳಿಕ ಟಿಟಿಡಿ ಮಂಡಳಿಯ ಉಳಿದ ಎಲ್ಲ ಸದಸ್ಯರೂ ರಾಜೀನಾಮೆ ಸಲ್ಲಿಸಿದ್ದರು.
ಈ ತೆರವಾದ ಸ್ಥಾನಗಳು ಇನ್ನೂ ಖಾಲಿ ಉಳಿದಿದ್ದು, ಹೊಸ ಸದಸ್ಯರ ನೇಮಕ ನಡೆಯಬೇಕಿದೆ. ತಾವು ಅಧ್ಯಕ್ಷರಾಗಿ ನೇಮಕವಾದ ಬಳಿಕ ಸುಬ್ಬಾರೆಡ್ಡಿ ಅವರು ಟಿಟಿಡಿಯಲ್ಲಿ ಅಸ್ತಿತ್ವದಲ್ಲಿದ್ದ ಎಲ್-1, ಎಲ್-2 ಮತ್ತು ಎಲ್-3 ಎಂಬ ಮೂರು ವರ್ಗಗಳ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಪಡಿಸಿ ಘೋಷಣೆ ಹೊರಡಿಸಿದ್ದರು. ಇದರ ವಿರುದ್ಧ ಅನೇಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಟಿಟಿಡಿ ಮಂಡಳಿಯಲ್ಲಿ ಸದಸ್ಯರೇ ಇಲ್ಲ. ಹೀಗಿರುವಾಗ ಮಂಡಳಿ ಅಧ್ಯಕ್ಷರು ಏಕಪಕ್ಷೀಯವಾಗಿ ಮಾಡಿರುವ ಘೋಷಣೆಯನ್ನು ಆದೇಶ ಎಂದು ಪರಿಗಣಿಸಲಾಗದು. ಈಗಿರುವ ವಿಐಪಿ ವ್ಯವಸ್ಥೆಯನ್ನು ರದ್ದುಪಡಿಸಿ ಸರ್ಕಾರವು ಹೊಸ ರೀತಿಯ ವ್ಯವಸ್ಥೆ ಜಾರಿ ಮಾಡಲು ಹುನ್ನಾರ ನಡೆಸಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.












Click it and Unblock the Notifications