ಪಟೇಲರ ಪ್ರತಿಮೆ ಉದ್ಘಾಟನೆಗೆ ಮೊಮ್ಮಗನೇ ಹೋಗಿಲ್ಲ, ಕಾರಣ ಏನು?
ಅಹ್ಮದಾಬಾದ್, ಅಕ್ಟೋಬರ್ 31: ಜಗತ್ತಿನ ಅತಿ ಎತ್ತರದ ಪಟೇಲರ ಪ್ರತಿಮೆ ಇಂದು ಉದ್ಘಾಟನೆಯಾಗಿದೆ. ಆದರೆ ಈ ಪ್ರತಿಮೆ ಉದ್ಘಾಟನೆ ಸರ್ದಾರ ಪಟೇಲರ ಸ್ವಂತ ಮೊಮ್ಮಗನೇ ಹಾಜರಾಗಿಲ್ಲ.
ಹೌದು, ಸಾವಿರಾರು ಜನ ಸರ್ದಾರ ಪಟೇಲರ ಪ್ರತಿಮೆ ಉದ್ಘಾಟನೆಯನ್ನು ನೇರವಾಗಿ, ಲಕ್ಷಾಂತರ ಜನ ಟಿವಿ, ಮೊಬೈಲ್‌ಗಳ ಮೂಲಕ ನೋಡಿ ಕಣ್ತುಂಬಿಕೊಂಡಿದ್ದಾರೆ ಆದರೆ ಸರ್ದಾರ ಪಟೇಲರ ನೇರ ಮೊಮ್ಮಗ ಮತ್ತು ಅವರ ಕುಟುಂಬ ಭಾಗವಹಿಸಿಲ್ಲ.
ಸರ್ದಾರ ಪಟೇಲರ ಇಬ್ಬರು ಮೊಮ್ಮಕ್ಕಳಲ್ಲಿ ಈಗ ಬದುಕಿರುವುದು ಒಬ್ಬರು ಮಾತ್ರವೇ. ಅವರ ಹೆಸರು ಗೌತಮ್ ಪಟೇಲ್. ಸರ್ದಾರರ ಮೊಮ್ಮಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಗುಜರಾತ್ ಮುಖ್ಯಮಂತ್ರಿಗಳ ಕಚೇರಿಯಿಂದ ಕೊನೆಯ ಕ್ಷಣದ ಭಾರಿ ಪ್ರಯತ್ನಗಳು ಮಾಡಲಾಯಿತಾದರೂ ಅವರನ್ನು ಕಾರ್ಯಕ್ರಮಕ್ಕೆ ಕರೆತರಲಾಗಿಲ್ಲ.

ಅಮೆರಿಕಕ್ಕೆ ತೆರಳಿದ ಮೊಮ್ಮಗ
ಗೌತಮ್ ಪಟೇಲ್ ಅವರು ಒಂದು ತಿಂಗಳ ಹಿಂದೆಯೇ ಅಮೆರಿಕಕ್ಕೆ ತಮ್ಮ ಮಡದಿಯೊಂದಿಗೆ ತೆರಳಿಬಿಟ್ಟಿದ್ದರು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಅಲ್ಲಿಯೇ ವಾಸವಿದ್ದಾರೆ. ಅವರು ಕೊನೆಕ್ಷಣದಲ್ಲಿ ಬರಲಾಗದ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಮೊಮ್ಮಗ ಬಿಟ್ಟು ಉಳಿದವರು ಹಾಜರು
ಆದರೆ ಸರ್ದಾರ ಪಟೇಲರ ಸಹೋದರರ ಮಕ್ಕಳು, ಮೊಮ್ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸರಿ ಸುಮಾರು 30 ಜನ ಸರ್ದಾರ ಪಟೇಲರ ವಂಶಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆದರೆ ಸರ್ದಾರರ ನೇರ ಮೊಮ್ಮಗ ಕಾರ್ಯಕ್ರಮಕ್ಕೆ ಬರಲಾಗದಿದ್ದುದು ಎದ್ದು ಕಾಣುತ್ತಿತ್ತು.

ಸಾರ್ವಜನಿಕ ಕಾರ್ಯಕ್ರಮದಿಂದ ದೂರ
ಗೌತಮ್ ಪಟೇಲ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯುವ ಮನಸ್ಥಿತಿಯವರಾಗಿದ್ದಾರೆ ಎಂದು ಸರ್ದಾರ್ ಪಟೇಲರ ಇತರ ವಂಶಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತ ರತ್ನ ಪಡೆದಿದ್ದ ಗೌತಮ್ ಪಟೇಲ್
ಸರ್ದಾರ ಪಟೇಲರ ಮೊಮ್ಮಗ ಗೌತಮ್ ಅವರು 1991 ರಲ್ಲಿ ಸರ್ದಾರ ಪಟೇಲರಿಗೆ ನೀಡಲಾದ ಭಾರತ ರತ್ನವನ್ನು ಅವರೇ ತೆಗೆದುಕೊಂಡಿದ್ದರು. ಅದೇ ಅವರು ಭಾಗಿಯಾದ ಕೊನೆಯ ಸಾರ್ವಜನಿಕ ಹಾಗೂ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.












Click it and Unblock the Notifications