ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು
ಅಹಮದಾಬಾದ್ (ಗುಜರಾತ್), ಅಕ್ಟೋಬರ್ 2: ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಹತ್ತು ಸಿಂಹಗಳ ಕಳೇಬರ ಪತ್ತೆಯಾಗಿವೆ. ಹೆಣ್ಣು ಸಿಂಹ ಹಾಗೂ ಮರಿಗಳ ಕಳೇಬರ ಪತ್ತೆಯಾದ ವಾರದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕಳೆದ ಹದಿನೆಂಟುಗಳಲ್ಲಿ ಇಪ್ಪತ್ತೊಂದು ಸಿಂಹಗಳು ಗಿರ್ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿವೆ.
ಸಿಂಹಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪರಿಸರ ಸಂರಕ್ಷರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ. ಪರಸ್ಪರ ಕಾದಾಟ, ಯಕೃತ್ ಮತ್ತು ಕಿಡ್ನಿಯಲ್ಲಿನ ಸೋಂಕು ಇತ್ತೀಚೆಗೆ ಸಿಂಹಗಳು ಸಾಯುವುದಕ್ಕೆ ಕಾರಣ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ.
ಗಿರ್ ಪ್ರದೇಶದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮೂವತ್ತೊಂದು ಸಿಂಹಗಳನ್ನು ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಅವುಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. "ಬೇರೆ ಯಾವುದೇ ಪ್ರದೇಶದಲ್ಲಿ ಸಿಂಹಗಳು ಮೃತಪಟ್ಟಿಲ್ಲ. ಸಮರ್ದಿ ಪ್ರದೇಶದ ಮೂವತ್ತೊಂದು ಸಿಂಹಗಳನ್ನು ಸ್ಥಳಾಂತರಿಸಿ, ಪ್ರತ್ಯೇಕವಾಗಿ ಇರಿಸಲಾಗಿದೆ. ಅವುಗಳ ವೈದ್ಯಕೀಯ ಪರೀಕ್ಷೆ ನಡೆದಿದೆ. ನಾವು ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ" ಎಂದು ಮುಖ್ಯ ಅರಣ್ಯ ಸಂರಕ್ಷಕ ಜುನಾಗಡದಲ್ಲಿ ತಿಳಿಸಿದ್ದಾರೆ.

ವಾರ್ಷಿಕವಾಗಿ ನೂರರಷ್ಟು ಸಿಂಹಗಳು ಸಾವನ್ನಪ್ಪುತ್ತವೆ. ಮುಂಗಾರಿನ ವೇಳೆ ಆ ಪ್ರಮಾಣ ಹೆಚ್ಚಿರುತ್ತದೆ. ಮುಂಗಾರಿನ ಸಮಯದ 3 ತಿಂಗಳಲ್ಲಿ ಪ್ರತಿ ವರ್ಷ ಸರಾಸರಿ 31-32 ಸಿಂಹಗಳು ಸಾವನ್ನಪ್ಪುತ್ತವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. 2015ರ ಗಣತಿ ಪ್ರಕಾರ, ಗಿರ್ ಅರಣ್ಯದಲ್ಲಿ 523 ಸಿಂಹಗಳಿವೆ.












Click it and Unblock the Notifications