ಉತ್ತರಾಖಂಡ್ ದುರಂತ : ಮತ್ತೆ 64 ಶವ ಪತ್ತೆ
ಉತ್ತರಾಖಂಡ್, ಸೆ.5 : ಜೂನ್ ತಿಂಗಳಿನಲ್ಲಿ ಉತ್ತರಾಖಂಡ್ ದಲ್ಲಿ ಸಂಭವಿಸಿದ್ದ ಮಳೆಯ ಅರ್ಭಟಕ್ಕೆ ಬಲಿಯಾಗಿದ್ದ 64 ಜನರ ಮೃತದೇಹಗಳು ಗುರುವಾರ ಕೇದಾರನಾಥ ಕಣಿವೆಯಲ್ಲಿ ಪತ್ತೆಯಾಗಿವೆ. ಎಲ್ಲಾ ಶವಗಳಿಗೂ ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಜೂನ್ ತಿಂಗಳಲ್ಲಿ ಸಂಭವಿಸಿದ್ದ 'ಮೇಘಸ್ಫೋಟ' ಮಳೆಯಿಂದಾಗಿ ಪ್ರಮುಖ ಧಾರ್ಮಿಕ ಕ್ಷೇತ್ರ ಕೇದಾರನಾಥ ಮತ್ತು ಬದ್ರಿನಾಥದಲ್ಲಿ ಸಾವಿರಾರು ಪ್ರವಾಸಿಗರು ಸಾವನ್ನಪ್ಪಿ, ನೂರಾರು ಯಾತ್ರಿಕರು ಕಣ್ಮರೆಯಾಗಿದ್ದರು.

ಪ್ರಸ್ತುತ ಕೇದಾರನಾಥದಲ್ಲಿ ವಾತಾವರಣ ತಿಳಿಗೊಳ್ಳುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿಹೋದ ಯಾತ್ರಿಕರ ಶವಗಳು ಪತ್ತೆಯಾಗುತ್ತಿವೆ. ಕೇದಾರ ಕಣಿವೆಯಲ್ಲಿ ಗುರುವಾರ 64 ಶವಗಳು ಪತ್ತೆಯಾಗಿದ್ದು, ಮೃತರು ಸಾಧುಗಳಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಇವರು ರಾಮಬಡ ಮತ್ತು ಕೇದಾರ ಕಣಿವೆ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಕೇದಾರನಾಥ ದೇವಾಲಯಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಕೇದಾರ ಕಣಿವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಇಷ್ಟು ದಿನ ಈ ಶವಗಳು ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಇದೀಗ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆಯೇ ಶವಗಳು ಗೋಚರಿಸಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶವಗಳು ನೀರಿನಲ್ಲಿ ಮುಳುಗಿದ್ದರಿಂದ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ಇವುಗಳನ್ನು ಹಿಂದೂ ಧಾರ್ಮಿಕ ವಿಧಿವಿಧಾನದಂತೆ ಸಾಮೂಹಿಕವಾಗಿ ಶವ ಸಂಸ್ಕಾರ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications