ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ

ಬೆಂಗಳೂರು, ಆ.27 : ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಮಹಾನಗರ ಪಾಲಿಕೆ ಕೈ ತಪ್ಪಲಿದೆ. ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ. ಈ ದೋಸ್ತಿಯಿಂದಾಗಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸೆ.5ರಂದು ನಡೆಯಲಿದ್ದು ಅಲ್ಲಿಯ ತನಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರು ಸಮೀಪದ ರೆಸಾರ್ಟ್ ಗೆ ಸೋಮವಾರ ಸಂಜೆಯೇ ಸದಸ್ಯರು ತೆರಳಿದ್ದಾರೆ.

ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮತ್ತು ಉಪ ಮೇಯರ್ ಸ್ಥಾನ ಎಸ್‌ಟಿಗೆ ಮೀಸಲಿಡಲಾಗಿದೆ. ಬಹುಮತ ಪಡೆಯಲು 37 ಸದಸ್ಯರ ಬೆಂಬಲ ಬೇಕಾಗಿದೆ. ಕಾಂಗ್ರೆಸ್ ಪಕ್ಷ ಕೆಜೆಪಿ, ಬಿಎಸ್‌ಆರ್, ಎಸ್‌ಡಿಪಿಎಸ್ ಹಾಗೂ ಪಕ್ಷೇತರರನ್ನು ಸೆಳೆದರೂ ಬಹುಮತ ಪಡೆಯಲು ಸಾಧ್ಯವಿಲ್ಲ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 65 ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್-22, ಬಿಜೆಪಿ-12, ಜೆಡಿಎಸ್-20 ಸದಸ್ಯರಿದ್ದಾರೆ. ಕೆಜೆಪಿ-1, ಬಿಎಸ್‌ಆರ್-1, ಎಸ್‌ಡಿಪಿಎಸ್-2, ಪಕ್ಷೇತರರು 7 ಮಂದಿ ಇದ್ದಾರೆ.

ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಬಿಜೆಪಿ ಸದಸ್ಯರ ಜೊತೆ ರೆಸಾರ್ಟ್ ಗೆ ತೆರಳಿದ್ದು, ಕಾಂಗ್ರೆಸ್ ಕೈಗೆ ಪಾಲಿಕೆ ಅಧಿಕಾರ ದೊರೆಯದಂತೆ ಕಾರ್ಯತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‌ನ 4 ಶಾಸಕರು, ಒಬ್ಬರು ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ 77 ಮಂದಿ ಮತದಾನ ಮಾಡಲಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ದಾವಣಗೆರೆಗೆ ನೂತನ ಜಿಲ್ಲಾಧಿಕಾರಿ

ದಾವಣಗೆರೆಗೆ ನೂತನ ಜಿಲ್ಲಾಧಿಕಾರಿ

ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಸ್.ಟಿ.ಅಂಜನ್‌ಕುಮಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಕಬ್ಬು ನಿಗಮದ ಆಯುಕ್ತರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಅಂಜನ್‌ಕುಮಾರ್ ನೇಮಕ ಮಾಡಲಾಗಿದೆ. ಬಿಬಿಎಂಪಿ ಉಪ ಆಯುಕ್ತ, ಹಾಸನ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ, ಚಿಕ್ಕಮಗಳೂರು ಮತ್ತು ಗದಗ ಜಿಲ್ಲಾಧಿಕಾರಿಯಾಗಿ ಅಂಜನ್ ಕುಮಾರ್ ಕಾರ್ಯನಿರ್ವಹಿಸಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶ ವಿದ್ಯಾರ್ಥಿ ಸಾವು

ವಿದ್ಯುತ್ ತಂತಿ ಸ್ಪರ್ಶ ವಿದ್ಯಾರ್ಥಿ ಸಾವು

ಕ್ರೀಡಾಕೂಟದ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸುವಾಗ ವಿದ್ಯುತ್ ಸ್ಪರ್ಶವಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಶೃಂಗೇರಿ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕಾರ್ತಿಕ್ (16) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದರೆ, ರಂಜನ್ ಗಾಯಗೊಂಡಿದ್ದಾನೆ. ಘಟನೆ ಕಂಡ ಶಿಕ್ಷಕ ಕೇಶವಮೂರ್ತಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಲಯ ಮಟ್ಟದ ಕ್ರೀಡಾಕೂಟಕ್ಕೆ ಧ್ವಜ ಕಟ್ಟುವಾಗ ಕಂಬಕ್ಕೆ ವಿದ್ಯುತ್ ಸ್ಪರ್ಶಿಸಿ ಈ ಅವಘಡ ನಡೆದಿದೆ.

ಸರ್ಕಾರದ ವಿರುದ್ಧ ಎಚ್ಡಿಕೆ ಗುಡುಗು

ಸರ್ಕಾರದ ವಿರುದ್ಧ ಎಚ್ಡಿಕೆ ಗುಡುಗು

ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸಚಿವರು ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಮಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಸಿಎಂ ಚೀನಾ ಪ್ರವಾಸ ಮಾಡುವುದು ಸರಿಯಲ್ಲ. ಜನಪರ ಆಡಳಿತ ಮಾಡುವುದು ಬಿಟ್ಟು ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ದೂರಿದರು.

 ಯಡಿಯೂರಪ್ಪ ಕರೆತರಲು ಮೋದಿ ಒಪ್ಪಿಗೆ

ಯಡಿಯೂರಪ್ಪ ಕರೆತರಲು ಮೋದಿ ಒಪ್ಪಿಗೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಪ್ಪಿಗೆ ನೀಡಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆ.8ರಂದು ನಾನು ದೆಹಲಿಗೆ ತೆರಳಲಿದ್ದು, ಸಂಸದೀಯ ಮಂಡಳಿ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.

ಭಟ್ಕಳ್ ತನಿಖೆಗೆ ಆಗ್ರಹ

ಭಟ್ಕಳ್ ತನಿಖೆಗೆ ಆಗ್ರಹ

ಯಾಸಿನ್ ಭಟ್ಕಳ್ ತುಮಕೂರಿನಲ್ಲಿ ನೆಲೆಸಿದ್ದಾಗ ಆತನಿಗೆ ಯಾರು ನೆರವು ನೀಡಿದ್ದರು ಎಂದು ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ. ಯಾಸಿನ್ ಭಟ್ಕಳ್ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ನೆಲೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಭಟ್ಕಳ್ ಗೆ ತುಮಕೂರಿನಲ್ಲಿ ನೆರವು ನೀಡಿದವರ ಕುರಿತು ಮಾಹಿತಿ ಕಲೆಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನೀರಿಗಾಗಿ ಹೆದ್ದಾರಿ ಬಂದ್

ನೀರಿಗಾಗಿ ಹೆದ್ದಾರಿ ಬಂದ್

ಘಟಪ್ರಭಾ ಎಡದಂಡೆ ನಾಲೆಯಿಂದ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ, ಚಿಕ್ಕೋಡಿ ತಾಲೂಕಿನ ಹತ್ತು ಗ್ರಾಮಗಳ ಜನರು ಮೀರಜ್ -ಬೆಳಗಾವಿ ಹೆದ್ದಾರಿಯನ್ನು ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು. ನೀರು ಹರಿಸದಿದ್ದರೆ ಗ್ರಾಮಗಳ ಬೆಳೆ ನಾಶವಾಗುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳಿದರು. ಪ್ರತಿಭಟನೆಯಿಂದಾಗಿ ಸುಮಾರು ನಾಲ್ಕು ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+