ಜೋಧಪುರ ಆಶ್ರಮದಿಂದ ಅಸಾರಾಮ್ ಬಾಪು ಪರಾರಿ
ಇಂದೋರ್/ಜೋಧಪುರ, ಆ. 31 : ಹದಿನಾರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಎಪ್ಪತ್ತೆರಡು ವರ್ಷದ ಸ್ವಯಂಘೋಷಿತ ದೇವಮಾನ ಅಸಾರಾಮ್ ಬಾಪು ಅವರನ್ನು ಬಂಧಿಸಲು ಮುಂದಾಗಿರುವ ಪೊಲೀಸರಿಗೆ ಬಾಪುವಿನ ಇರುವಿಕೆಯ ಸುಳಿವು ಇನ್ನೂ ದೊರೆತಿಲ್ಲ.
ಕಳೆದ ರಾತ್ರಿಯೇ ತನ್ನ ಮಗ ನಾರಾಯಣ ಸಾಯಿ ಜೊತೆ ಸ್ಪೋರ್ಟ್ಸ್ ಯುಟಿಲಿಟಿ ವಾಹನದಲ್ಲಿ ಅಸಾರಾಮ್ ಬಾಪು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅಸಾರಾಮ್ ತನ್ನ ಆಶ್ರಮದಲ್ಲಿಯೇ ತಲೆಮರೆಸಿಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಪೊಲೀಸರು ಈಗ ಆಶ್ರಮವನ್ನು ಹೊಕ್ಕಿದ್ದು ಬಾಪುವಿನ ಹುಡುಕಾಟದಲ್ಲಿ ತೊಡಗಿದ್ದಾರೆ.
ಈ ನಡುವೆ, ವರದಿಗಾಗಿ ಆಶ್ರಮಕ್ಕೆ ತೆರಳಿದ್ದ ಖಾಸಗಿ ವಾಹಿನಿಯ ಪತ್ರಕರ್ತರ ಮೇಲೆ ಅಸಾರಾಮ್ ಬಾಪುವಿನ ರೌಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಫೋಟೋಗ್ರಾಫರ್ ಕ್ಯಾಮೆರಾವನ್ನು ಕೂಡ ಕಿತ್ತುಕೊಂಡಿದ್ದಾರೆ. ಹಲ್ಲೆ ನಡೆಸಿದ 6 ಜನರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ಧ ಕೇಸು ಜಡಿಯಲಾಗಿದೆ.

ಅಸಾರಾಮ್ ಬಾಪು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಜೋಧಪುರದ ಖಂಡ್ವಾ ರಸ್ತೆಯಲ್ಲಿರುವ ಅವರ ಆಶ್ರಮದ ಮುಂದೆ ಬಾಪುವಿನ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ನೆರೆದು ಪೊಲೀಸರಿಗೆ ತಡೆಯನ್ನುಂಟು ಮಾಡುತ್ತಿದ್ದಾರೆ. ಇದು, ಅಸಾರಾಮ್ ಆಶ್ರಮದಲ್ಲೇ ಅಡಗಿಕೊಂಡಿರಬಹುದು ಎಂಬ ಸುದ್ದಿಗೆ ಪುಷ್ಟಿ ನೀಡುತ್ತಿದೆ.
ಬಾಲಕಿಯ ಮೇಲೆ ಬಾಪು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ತಾನ ಪೊಲೀಸರು ಠಾಣೆಗೆ ಹಾಜರಾಗಬೇಕೆಂದು ಅಸಾರಾಮ್ ಅವರಿಗೆ ಆದೇಶಿಸಿದ್ದರು. ಆದರೆ, ಶುಕ್ರವಾರವೂ ಅಸಾರಾಮ್ ಹಾಜರಾಗದಿದ್ದರಿಂದ ಅನ್ಯಮಾರ್ಗವಿಲ್ಲದೆ ಅವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಆಶ್ರಮದ ಸುತ್ತ ಪೊಲೀಸರು ಭಾರೀ ಬಿಗಿಬಂದೋಬಸ್ತ್ ಆಯೋಜಿಸಿದ್ದಾರೆ.
ಜೋಧಪುರದಲ್ಲಿರುವ ಆಶ್ರಮದಲ್ಲಿದ್ದ 16 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಅಸಾರಾಮ್ ಬಾಪು ಎದುರಿಸುತ್ತಿದ್ದಾರೆ. ಈ ಆರೋಪವನ್ನು ಅಸಾರಾಮ್ ತಳ್ಳಿಹಾಕಿದ್ದರು. ಅಸಾರಾಮ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.












Click it and Unblock the Notifications