3 ಜಿಲ್ಲೆಗಳ ಭ್ರಷ್ಟರ ಮೇಲೆ ಲೋಕಾಯುಕ್ತರ ದಾಳಿ
ಬೆಂಗಳೂರು, ಆ. 30: ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಂಜಾನೆ ಭ್ರಷ್ಟ ಅಧಿಕಾರಿ ಮನೆಗಳ ಕದ ತಟ್ಟಿದ್ದಾರೆ. ಬೆಂಗಳೂರು, ಹುಬ್ಬಳ್ಳಿ ಹಾಗೂ ಯಾದಗಿರಿ ಜಿಲ್ಲೆಯ ಐವರು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಭಾರಿ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ.
ಬಿಬಿಎಂಪಿ ಸಹಾಯಕ ಇಂಜಿನಿಯರ್ ರಾಮಯ್ಯ ಅವರ ನಾಗರಬಾವಿ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಭಾರೀ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. ರಾಮಯ್ಯ ನಗರದ ಕೆ.ಆರ್.ರಸ್ತೆ ಮತ್ತು ಮತ್ತೀಕೆರೆಯಲ್ಲಿ ಕ್ಲೀನಿಕ್ ಗಳನ್ನು ನಡೆಸುತ್ತಿದ್ದು, ಅಲ್ಲೂ ಕೂಡಾ ದಾಳಿ ನಡೆಸಲಾಗಿದೆ.

ಮಾಗಡಿಯಲ್ಲಿರುವ ಅವರ ಮತ್ತೊಂದು ಐಷಾರಾಮಿ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಕರ್ನಾಟಕ ಲೆದರ್ಸ್ ಟೆಕ್ನಾಲಜಿ ಸಂಸ್ಥೆ ನಿರ್ದೇಶಕ ಚಿಕ್ಕಯ್ಯ ಅವರ ಗಿರಿನಗರ, ಉಲ್ಲಾಳುವಿನಲ್ಲಿರುವ ನಿವಾಸಗಳು ಹಾಗೂ ಕೆ.ಜಿ.ಹಳ್ಳಿಯ ಕಚೇರಿ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ ಎಸ್ಪಿ ಮಾರ್ಟಿನ್ ಹಾಗೂ ಡಿವೈಎಸ್ಪಿ ನಾರಾಯಣ ಅವರು ಅಕ್ರಮ ಆಸ್ತಿ ಗಳಿಕೆ ಬಗ್ಗೆ ಪರಿಶೀಲನೆ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಎಸ್ಪಿ ಪರಶುರಾಮ್ ನೇತೃತ್ವದ ಲೋಕಾಯುಕ್ತ ತಂಡ ಪಟ್ಟಣದಲ್ಲಿರುವ ಕೆಎಸ್‌ಆರ್‌ಟಿಸಿ ನೌಕರರ ಸಹಕಾರ ಪತ್ತಿನ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಕಾಶಮೂರ್ತಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆಯ ದಾಖಲೆ ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಎಸ್ಪಿ ಎಸ್.ಎಸ್.ಕಂಬಾರ್ ನೇತೃತ್ವದ ತಂಡ ಗುಲ್ಬರ್ಗದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಶಿವಶಂಕರಪ್ಪ ಮುನವಳ್ಳಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಗೋದು ತಾಯಿ ಕಾಲೋನಿಯಲ್ಲಿರುವ 7 ಲಕ್ಷ ಮೌಲ್ಯದ ವಸತಿ ಹಾಗೂ ಎನ್ ಜಿಒ ಕಾಲೋನಿಯಲ್ಲಿ 10 ಲಕ್ಷ ಮೌಲ್ಯದ ವಸತಿ, ರಾಮತೀರ್ಥದಲ್ಲಿ ನಿವೇಶನ, ಬೆಂಗಳೂರಿನಲ್ಲಿ ಬಿಡಿಎ ನಿವೇಶನ ಸೇರಿದಂತೆ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಹಚ್ಚಿದೆ.

ಯಾದಗಿರಿಯಲ್ಲಿ ಲೋಕಾ ಪೊಲೀಸರು ಬಿಯುಡಿಸಿ ಯೋಜನಾ ನಿರ್ದೇಶಕ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಖಾನಾಪುರ ಪಟ್ಟಣದ ಮಿನಿವಿಧಾನಸೌಧದಲ್ಲಿ ರೈತರೊಬ್ಬರ ಜಮೀನಿನ ನಕಾಶೆ ಪೂರೈಸುವ ಸಲುವಾಗಿ ಅವರಿಂದ ಒಂದು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭೂಮಾಪನ ವಿಭಾಗದ ಭೂಮಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಗುರುವಾರ ಸಂಭವಿಸಿದೆ. ಪಟ್ಟಣದ ತಹಶೀಲ್ದಾರ ಕಚೇರಿಯ ಭೂ ಮಾಪನ ವಿಭಾಗದ ಸರ್ವೇಯರ್ ಜಗದೀಶ ಸುಭಾಸ ಗೌರಣ್ಣವರ ಎಂಬಾತನನ್ನು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications