Get Updates
Get notified of breaking news, exclusive insights, and must-see stories!

ಯುಪಿಎ ಸರ್ಕಾರದ ಆಹಾರ ಭದ್ರತೆಗೆ ಅನುಮೋದನೆ ಸಿಕ್ತು!

ನವದೆಹಲಿ, ಆಗಸ್ಟ್ 27: ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಮಂಡಿಸಿದ ಮಹತ್ವಾಕಾಂಕ್ಷಿ ಆಹಾರ ಭದ್ರತಾ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಬಹುಚರ್ಚಿತ ಮಸೂದೆಗೆ ಸೋಮವಾರ ರಾತ್ರಿ 10.45ರಲ್ಲಿ ಅನುಮೋದನೆ ಸಿಕ್ಕಿದೆ.

ಆದರೆ ರಾಜಕೀಯ ಮಹತ್ವದ ಈ ಮಸೂದೆಗೆ ಅಂಗೀಕಾರ ಪಡೆಯುವಾಗ ಮಸೂದೆಯ ರೂವಾರಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು AIIMS ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಬಳಿಕ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹಾಗಾಗಿ ಭಾರತಕ್ಕೆ ನಿನ್ನೆಯ ದಿನ (ಆಗಸ್ಟ್ 26) ಚರಿತ್ರಾರ್ಹ ದಿನವಾಗಿದೆ ಎಂದೇ ಹೇಳಬಹುದು. ಆಹಾರ ಭದ್ರತೆಯ ಸಾಧಕಗಳು ಎಂದಿಗೋ ಎಂಬುದು ಪ್ರಶ್ನಾರ್ಹವಾದರೂ ಬಡವರಿಗೆ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಸಂತಸ/ಸಮಾಧಾನಪಡಬಹುದು.

lok-sabha-endorses-congress-lead-upa-food-security-bill

ಈ ಆಹಾರ ಭದ್ರತೆ ಮಸೂದೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ 2009ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಮಸೂದೆಗೆ ಅಪಸ್ವರವೆತ್ತಿ, ವಿರೋಧ ಪಕ್ಷಗಳು ಮಸೂದೆಯಲ್ಲಿ 308 ತಿದ್ದುಪಡಿಗಳು ಆಗಬೇಕು ಎಂದು ಸೂಚಿಸಿದ್ದವು. ಆದರೆ ಅದ್ಯಾವುದಕ್ಕೂ ಸಂಸತ್ತಿನಲ್ಲಿ ಮನ್ನಣೆ ಸಿಗಲಿಲ್ಲ.

ಅಹಾರ ಸಚಿವ ಕೆ ವಿ ಥಾಮಸ್ ಸೂಚಿಸಿದ ಹತ್ತು ಅಧಿಕೃತ ತಿದ್ದುಗಳು ಮಾತ್ರ ಅಂಗೀಕೃತಗೊಂಡವು. ಆದಾಗ್ಯೂ ವಿರೋಧ ಪಕ್ಷಗಳು ಮಂಡಿಸಿರುವ ತಿದ್ದುಪಡಿಗಳನ್ನು ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಆದ್ಯವಾಗಿ ಪರಿಗಣಿಸಲಾಗುವುದು ಎಂದು ಸಚಿವ ಥಾಮಸ್ ಸ್ಪಷ್ಟಪಡಿಸಿದರು.

ಬಿಜೆಪಿದು ಅರೆಮನಸ್ಸಿನ ಬೆಂಬಲ:
ಪ್ರತಿಪಕ್ಷವಾದ ಬಿಜೆಪಿ ವಿಧೇಯಕವನ್ನು ಅರೆಮನಸ್ಸಿನಿಂದ ಬೆಂಬಲಿಸಿದ್ದರಿಂದ ವಿಧೇಯಕ ಜಾರಿ ಸುಗಮವಾಯಿತು. ಇದರ ಜತೆಗೆ ಹಿಂದೂ ವಿವಾಹ ಕಾಯಿದೆಯನ್ನು ಮತ್ತಷ್ಟು ಮಹಿಳಾ ಸ್ನೇಹಿಯಾಗಿಸುವ ವಿಧೇಯಕಕ್ಕೂ ರಾಜ್ಯಸಭೆ ಅನುಮೋದನೆ ನೀಡಿದೆ. ಈ ನಡುವೆ ಸಂಸತ್ ಅಧಿವೇಶನವನ್ನು ಸೆ. 6ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ವಿಶ್ವದ ಅತಿ ದೊಡ್ಡ ಯೋಜನೆ:
ಮಸೂದೆ ಮೇಲಿನ ಚರ್ಚೆಯಲ್ಲಿ ಆರಂಭದಲ್ಲಿ ಮಾತನಾಡಿದ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಬಡವರ ಹಸಿವು ಮತ್ತು ಅಪೌಷ್ಟಿಕತೆ ತೊಡೆದುಹಾಕುವ ಉದ್ದೇಶದಿಂದ ರೂಪಿಸಿರುವ ಆಹಾರ ಭದ್ರತಾ ಮಸೂದೆಗೆ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ ಬೆಂಬಲ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

'ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇದು ವಿಶ್ವದ ಅತಿ ದೊಡ್ಡ ಯೋಜನೆಯಾಗಿದೆ. ಈ ವಿಧೇಯಕ ಜಾರಿಯಿಂದಾಗಿ ದೇಶದ ಶೇ. 67ರಷ್ಟು, ಅಂದರೆ 82 ಕೋಟಿ ಜನ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಪಡೆಯಲಿದ್ದಾರೆ ಎಂದು ಅವರು ಸಂಸತ್ತಿಗೆ ತಿಳಿಸಿದರು.

'ಈ ಮಹತ್ವದ ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಇಲ್ಲ' ಎಂಬ ವಿರೋಧ ಪಕ್ಷಗಳ ಆಕ್ಷೇಪವನ್ನು ತಳ್ಳಿಹಾಕಿದರು. 'ಆಹಾರ ಭದ್ರತೆ ಮಸೂದೆ ಜಾರಿಗೆ ಸಹಕರಿಸುವ ಮೂಲಕ ಎಲ್ಲ ಜನರಿಗೂ ಆಹಾರ ಒದಗಿಸಲು ದೇಶ ಸಶಕ್ತವಾಗಿದೆ' ಎಂಬ ಸಂದೇಶ ಕಳುಹಿಸಬೇಕೆಂದು ಸಲಹೆ ಮಾಡಿದರು.

ಆಹಾರ ಭದ್ರತೆ ಯೋಜನೆ ಉದ್ದೇಶಿತ ಫಲಾನುಭವಿಗಳಿಗೆ ಮುಟ್ಟಬೇಕಾದರೆ ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ತಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖ ಆಗಲಿದೆ ಎಂದು ಭರವಸೆ ನೀಡಿದರು.

ಮತ ಭದ್ರತೆ ಮಸೂದೆ:
ಇದು ಆಹಾರ ಭದ್ರತೆ ಮಸೂದೆಯಲ್ಲ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಂಡಿಸಿದ ಮತ ಭದ್ರತೆ ಮಸೂದೆ' ಎಂದು ಬಿಜೆಪಿಯ ಮುರಳಿ ಮನೋಹರ ಜೋಷಿ ಅವರು ಟೀಕಿಸಿದರಾದರೂ 'ನಾವು ಆಹಾರ ಮಸೂದೆ ಪರವಾಗಿದ್ದೇವೆ. ಆದರೆ, ಅದರಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಬೇಕು' ಎಂದು ಸಲಹೆ ಮಾಡಿದರು.

ಚುನಾವಣೆ ಮೇಲೆ ಕಣ್ಣು:
ಯುಪಿಎಗೆ ಹೊರಗಿನಿಂದ ಬೆಂಬಲ ಕೊಡುತ್ತಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್, 2014ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಆಹಾರ ಭದ್ರತೆ ಮಸೂದೆ ಜಾರಿಗೆ ತರಲಾಗುತ್ತಿದೆ ಎಂದು ಟೀಕಿಸಿದರು. ಯೋಜನೆಯಿಂದ ರಾಜ್ಯಗಳ ಮೇಲೆ ಹೆಚ್ಚುವರಿ ಹೊರೆ ಬೀಳುವುದರಿಂದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿದರೆ ಬೆಂಬಲ ಕೊಡಲು ಸಿದ್ಧ ಎಂಬ ಷರತ್ತು ಹಾಕಿದರು.

ಮಸೂದೆಯ ವಿಶೇಷತೆಗಳೇನು?
ಆಹಾರ ಭದ್ರತೆ ಮಸೂದೆ ಬಡ ಕುಟುಂಬದ ಪ್ರತಿ ಸದಸ್ಯನಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯ ಪೂರೈಸಲಿದೆ. ಇದರಲ್ಲಿ 1 ಕೆಜಿ ಅಕ್ಕಿಗೆ 3 ರೂಪಾಯಿ, ಗೋಧಿಗೆ 2 ರೂಪಾಯಿ, ಬೇಳೆ ಕಾಳಿಗೆ 1 ರೂಪಾಯಿ ದರ ನಿಗದಿಪಡಿಸಲಾಗಿದೆ. ಸುಮಾರು 80 ಕೋಟಿ ಜನರಿಗೆ ಇದರ ಲಾಭ ದೊರೆಯಲಿದ್ದು, ಸರ್ಕಾರದ ಮೇಲೆ ಪ್ರತಿವರ್ಷ ಸುಮಾರು 1.25 ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+