ವಾರ್ಡ್ ಬಾಯ್ ಕಾಟ: ಇಎಸ್ಐ ನರ್ಸ್ ಆತ್ಮಹತ್ಯೆ

ನರ್ಸಿಂಗ್ ಡಿಪ್ಲೋಮಾ ಮಾಡಿದ ಬಳಿಕ ಇಎಸ್ಐ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇರಿಕೊಂಡು ಜೀವನ ರೂಪಿಸಿಕೊಳ್ಳುತ್ತಿದ್ದ ಬಿಂದುಕಳೆದ ನಾಲ್ಕು ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಡೆತ್ ನೋಟ್ ಬರೆದಿಟ್ಟಿರುವ ಬಿಂದು ತನ್ನ ಸಾವಿಗೆ ಯಾರೂ ಕಾರಣವಲ್ಲ ಎಂದು ತಿಳಿಸಿದ್ದಾರೆ. ಒಂಡಿತನ ಕಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅವರ ತಂದೆ-ತಾಯಿ ಇತ್ತೀಚೆಗೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಆದರೆ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ವಾರ್ಡ್ ಬಾಯ್ ನವೀನ್ ಎಂಬುವವನು ಬಿಂದು ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ, ಪ್ರೀತಿಗಾಗಿ ಬಿಂದುವನ್ನು ಹಂಬಲಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಬಿಂದು, ನವೀನನಿಂದ ತನಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಸಾವು:
ಗಾಯತ್ರಿ ಲೇಔಟಿನ 11 ನೇ ಕ್ರಾಸ್ ರಸ್ತೆಯಲ್ಲಿರುವ ಮಹಿಳಾ ಪಿಜಿ ಸೆಂಟರಿನಲ್ಲಿ ವಾಸ್ತವ್ಯ ಹೂಡಿದ್ದ ಬಿಂದು ಸೋಮವಾರ ಕೆಲಸಕ್ಕೆ ಹೋಗಿರಲಿಲ್ಲ. ಕೇರಳದಿಂದ ಬಂದಿದ್ದ ಗೆಳತಿ ಶೈನಿ ಜತೆ ಕೆಲ ಹೊತ್ತು ಮಾತನಾಡಿದ್ದಾರೆ. ಬಳಿಕ ಸ್ನಾನ ಮಾಡಿಬರುವುದಾಗಿ ಸ್ನಾನದ ಕೋಣೆಗೆ ತೆರಳಿದ್ದಾರೆ.
ಎಷ್ಟು ಹೊತ್ತಾದರೂ ಬಿಂದು ಹೊರಬಂದಿಲ್ಲ. ಇದರಿಂದ ಆತಂಕಗೊಂಡ ಶೈನಿ, ಇತರೆ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಅನುಮಾನ ತೀವ್ರವಾದಾಗ ಬಾಗಿಲು ಮುರಿದು ಒಳಹೊಕ್ಕಿದ್ದಾರೆ. ಅಲ್ಲಿ ಬಿಂದು ತೀವ್ರವಾಗಿ ಅಸ್ವಸ್ಥಗೊಂಡು ಬಿದ್ದಿರುವುದು ಕಂಡಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಬಿಂದು ಅಸುನೀಗಿದ್ದಾರೆ. ಬಸವೇಶ್ವರ ನಗರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications