ಡಿಕೆ ಶಿವಕುಮಾರ್ ತಾಯಿ ನನಗೂ ತಾಯಿ: ಕುಮಾರಸ್ವಾಮಿ
ಕನಕಪುರ, ಆಗಸ್ಟ್ 26: ತಮ್ಮನನ್ನೇ ಪಣಕ್ಕಿಟ್ಟು, ಅದರಲ್ಲಿ ಗೆಲುವನ್ನೂ ದಕ್ಕಿಸಿಕೊಂಡ ಡಿಕೆ ಶಿವಕುಮಾರ್ ಅವರಿಗೆ ಸದ್ಯಕ್ಕೆ ಮಂತ್ರಿಯಾಗುವ ಯೋಗ ಇನ್ನೂ ಒದಗಿಬಂದಂತಿಲ್ಲ. ಇದು ದೆಹಲಿಯಿಂದ ಹೊರಬಿದ್ದಿರುವ ಕಮಾಂಡು! ಈ ಮಧ್ಯೆ, 'ಶಿವಕುಮಾರ ಒಂದಲ್ಲ ಒಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ, ಅಂಥ ಕಾಲ ದೂರವಿಲ್ಲ' ಎಂದು ಮಹತಾಯಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಹೀಗೆ ಹೇಳಿರುವುದು ಬೇರೆ ಯಾರೂ ಅಲ್ಲ. ಅತ್ತ ಹಿರಿಯ ಮಗ (ಡಿಕೆ ಶಿವಕುಮಾರ್) ಇತ್ತ ಕಿರಿಯ ಮಗ (ಡಿಕೆ ಸುರೇಶ್) ಒಂದೇ ಏಟಿಗೆ ಗೆಲುವು ಸಾಧಿಸಿರುವುದನ್ನು ಕಂಡು ಸಂತೃಪ್ತಗೊಂಡಿರುವ ಶಿವಕುಮಾರ್ ಅವರ ಹೆತ್ತಮ್ಮ ಹೀಗೆ ಹಾರೈಸಿದ್ದಾರೆ.
'ನನ್ನ ಮಗ ಮುಂದೊಂದು ದಿನ ಮುಖ್ಯಮಂತ್ರಿಯಾಗ್ತಾನೆ. ಅಂಥ ಕಾಲ ದೂರವಿಲ್ಲ' ಎಂದು ಕನಕಪುರ ಶಾಸಕ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ಆತ್ಮವಿಶ್ವಾಸದ ನುಡಿಗಳಿವು.

ಡಿಕೆ ಸುರೇಶ್ ಸಂಸದನಾಗಿರುವುದು ಖುಷಿ ಕೊಟ್ಟಿದೆ.
ಎರಡನೆ ಮಗ ಡಿಕೆ ಸುರೇಶ್ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇಬ್ಬರೂ ಉತ್ತಮ ಆಡಳಿತ ನಡೆಸುತ್ತಾರೆ, ಇಬ್ಬರೂ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಶಿವಕುಮಾರ್ ಐದು ಬಾರಿ ಶಾಸಕರಾಗಿ ಮತ್ತು ಸಚಿವರಾಗಿ ಜನರಿಗೆ ಒಳ್ಳೆಯದನ್ನೇ ಮಾಡಿದ್ದಾನೆ. ಈಗ ಎರಡನೆ ಮಗ ಸುರೇಶ ಎಂಪಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾನೆ. ಇಬ್ಬರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿ. ಅಹಂ ಬೇಡ, ವೈಯಕ್ತಿಕ ದ್ವೇಷ ಸಾಧನೆಗೆ ಹೋಗುವುದು ಬೇಡ ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.

ರಮ್ಯಾ ತಂದೆ ಪ್ರಶ್ನೆ ಮುಗಿದ ಅಧ್ಯಾಯವಾದರೂ
ಇದು ತೀರಾ ಅಪ್ರಸ್ತುತ ಅನಿಸಿದರೂ ಇತ್ತೀಚೆಗೆ ರಮ್ಯಾ ತಂದೆ ಯಾರು ಎಂದು ಜೆಡಿಎಸ್ ಅಧಿನಾಯಕರು ಒಂದೇ ಸಮನೆ ಪ್ರಶ್ನಿಸಿದ್ದರ ಹಿನ್ನೆಲೆಯಲ್ಲಿ ಇಲ್ಲೊಂದು ಪ್ರಸಂಗವನ್ನು ನೆನಪಿಸಿಕೊಳ್ಳಬೇಕಾಗಿದೆ.

ನಿಜವಾದ ತಂದೆಗೆ ಹುಟ್ಟಿದ ಮಗನೇ ಆಗಿದ್ದರೆ
2007ರ ಆಗಸ್ಟ್: ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಡೆದ ಪ್ರಸಂಗ. ರಾಜಕೀಯವಾಗಿ ಬದ್ಧವೈರಿಗಳಾದ ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಜಟಾಪಟಿ ವಿಪರೀತಕ್ಕೆ ಹೋದ ಕಾಲವದು. ಆದರೆ ಅದೇನು ಚುನಾವಣೆ ಕಾಲವಾಗಿರಲಿಲ್ಲ. ಆದರೂ ಕುಮಾರಸ್ವಾಮಿ ಅವರು ಶಿವಕುಮಾರ್ ಅವರಿಗೆ, 'ನೀವು ನಿಜವಾದ ತಂದೆಗೆ ಹುಟ್ಟಿದ ಮಗನೇ ಆಗಿದ್ದರೆ...' ಎಂದು ಬಡಬಡಿಸಿದ್ದರು.

'ಶಿವಕುಮಾರ್ ತಾಯಿ ತಮಗೂ ತಾಯಿ ಇದ್ದಂತೆ'
ಶಿವಕುಮಾರ್ ತಮ್ಮ ತಾಯಿಯನ್ನು ಕುಮಾರಸ್ವಾಮಿ ಮತ್ತು ತಾವೂ ಭಾಗವಹಿಸಬೇಕಿದ್ದ ಸಾತನೂರಿನ ಬಹಿರಂಗ ಸಭೆಗೆ ಕರೆದುಕೊಂಡು ಬಂದು 'ನನ್ನ ತಂದೆ ಯಾರು ಎಂಬುದನ್ನು ನನ್ನ ತಾಯಿಯಿಂದಲೇ ಕುಮಾರಸ್ವಾಮಿ ತಿಳಿದುಕೊಳ್ಳಲಿ' ಎಂದು ಸವಾಲಿಗೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಅಷ್ಟೊತ್ತಿಗೆ ಕುಮಾರಸ್ವಾಮಿ ಕ್ಷಮೆ ಕೇಳಿದರು ಅನ್ನಿ. 'ಶಿವಕುಮಾರ್ ಅವರ ತಾಯಿ ತಮಗೂ ತಾಯಿ ಇದ್ದಂತೆ' ಎಂದು ನಾಜೂಕಯ್ಯನಂತೆ ಜಾರಿಕೊಂಡಿದ್ದರು.












Click it and Unblock the Notifications