ವರ್ಗಾವಣೆ ಆರ್ಡರ್: ಯಡಿಯೂರಪ್ಪ ಮೀರಿಸಿದ ಸಿದ್ದು

KAS Officers Transfer Karnataka
ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾಲದಲ್ಲಿ ಆರಂಭವಾದ ಅಧಿಕಾರಿಗಳ ರಾಶಿಗಟ್ಟಲೆ ವರ್ಗಾವಣೆ ಚಾಳಿ ಸದಾನಂದ ಗೌಡರ ನಂತರ ಜಗದೀಶ್ ಶೆಟ್ಟರ್ ಅವರ ಕಾಲದಲ್ಲೂ ಮುಂದುವರೆದಿತ್ತು. ಅಧಿಕಾರಿಗಳ ವರ್ಗಾವಣೆ ನಿರೀಕ್ಷಿತ ಅದರೆ, ಸಿದ್ದರಾಮಯ್ಯ ಅವರ ಸರ್ಕಾರ ನೂರಾರು ಅಧಿಕಾರಿಗಳನ್ನು ಒಮ್ಮೆಗೆ ವರ್ಗಾವಣೆ ಮಾಡಿ ದಾಖಲೆ ನಿರ್ಮಿಸಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ತಡೆ ಹಿಡಿಯಲಾಗಿತ್ತು. ಚುನಾವಣೆಯಲ್ಲಿ ಡಬಲ್ ಧಮಾಕ ಬಾರಿಸಿದ ಬೆನ್ನಲ್ಲೇ 19 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೂರಾರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಲೋಕಸಭೆ ಉಪಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿಶೇಷ ಡಿಸಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸೇರಿದಂತೆ 136ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳನ್ನು ಶನಿವಾರ ವರ್ಗಾಯಿಸಿದೆ.

ಮೂರು ದಿನಗಳಿಂದ ನಡೆಯುತ್ತಿದ್ದ ಅಧಿಕಾರಿಗಳ ವರ್ಗಾವಣೆ ಸರ್ಕಸ್ ಶನಿವಾರ ರಾತ್ರಿ ಮುಕ್ತಾಯಗೊಂಡಿದೆ. ಜಿಲ್ಲಾಡಳಿತ, ನಾನಾ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟು ಕುಳಿತಿರುವ ಹಿರಿಯ-ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾಯಿಸಿ ಆಡಳಿತಯಂತ್ರವನ್ನು ಸರಿದಾರಿಗೆ ತರಲು ಸರಕಾರ ಮುಂದಾಗಿತ್ತು.

ದಿಢೀರ್ ಆಗಿ ಎರಡು ಕ್ಷೇತ್ರಗಳ ಲೋಕಸಭೆ ಹಾಗೂ ಮೂರು ಮೇಲ್ಮನೆ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದರಿಂದ ನೀತಿ ಸಂಹಿತೆ ಎದುರಾಗಿತ್ತು. ಚುನಾವಣೆ ಕಾರ್ಯದಲ್ಲಿ ಬಹುತೇಕ ಕೆಎಎಸ್ ಅಧಿಕಾರಿಗಳೇ ಪ್ರಧಾನ ಪಾತ್ರ ವಹಿಸುವುದರಿಂದ ಅವರ ವರ್ಗಾವಣೆ ಮಾಡಲು ಅಡ್ಡಿಯಾಗಿತ್ತು.

ಮತದಾನ ಪ್ರಕ್ರಿಯೆ ಮುಗಿದ ಆ.22ರಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಕಳೆದ ಮೂರು ದಿನಗಳಿಂದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಸಿಬ್ಬಂದಿ ತಡರಾತ್ರಿಯವರೆಗೂ ವರ್ಗಾವಣೆ ಪಟ್ಟಿ ಸಿದ್ಧಗೊಳಿಸುವಲ್ಲಿ ತಲ್ಲೀನರಾಗಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಸಂಜೆ ವರ್ಗಾವಣೆ ಕಡತಕ್ಕೆ ಅಂಕಿತ ಹಾಕಿದ್ದು, ತಡರಾತ್ರಿ ಆದೇಶ ಹೊರಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+