ಉಪ ಚುನಾವಣೆ ಫಲಿತಾಂಶಕ್ಕೆ ಭಾರೀ ಬೆಟ್ಟಿಂಗ್!

ಮಂಡ್ಯ ಸಮೀಪದ ಭಾರತೀನಗರದಲ್ಲಿ ರಮ್ಯಾ ಗೆಲ್ಲುತ್ತಾರೆ ಎಂಬುದಾಗಿ ಕಾಂಗ್ರೆಸ್ ಕಾರ್ಯಕರ್ತರು ಸ್ಕೂಟರ್ ಮತ್ತು ಕಾರುಗಳನ್ನು ಬೆಟ್ಟಿಂಗ್ ಕಟ್ಟಿದ್ದರೆ, ಪುಟ್ಟರಾಜು ಪರ ಸ್ಥಳೀಯ ಜೆಡಿಎಸ್ ಮುಖಂಡರೊಬ್ಬರು ಸೈಟನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ.
50 ಲಕ್ಷ ರೂ.ನಗದು ವ್ಯವಹಾರ ಕೂಡ ಬೆಟ್ಟಿಂಗ್ ರೂಪದಲ್ಲಿ ಹರಿದಾಡುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯ ಕೊಪ್ಪಲಿನಲ್ಲಿ ರಮ್ಯಾ ಪರ ವ್ಯಕ್ತಿಯೊಬ್ಬ ತಮ್ಮ ಎರಡಂತಸ್ತಿನ ಮನೆಯನ್ನೇ ಬೆಟ್ಟಿಂಗ್ ನಲ್ಲಿ ಪಣಕಿಟ್ಟಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮೊಬೈಲ್ ಅಂಗಡಿಯ ಯುವಕನೊಬ್ಬ ಜೆಡಿಎಸ್ ಪರವಾಗಿ ಒಂದು ಲಕ್ಷ ರೂ. ನಗದನ್ನು ಬೆಟ್ಟಿಂಗ್ ಕಟ್ಟಿದ್ದಾರೆ. ಮಂಡ್ಯದಲ್ಲಿ ಇಬ್ಬರು ಲಾರಿ ಮಾಲೀಕರು ರಮ್ಯಾ ಮತ್ತು ಸಿ.ಎಸ್.ಪುಟ್ಟರಾಜು ಪರವಾಗಿ ಬೆಟ್ಟಿಂಗ್ ಕಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ 1 ರಿಂದ 10 ಸಾವಿರ ರೂ. ವರೆಗೆ ಬೆಟ್ಟಿಂಗ್ ನಡೆಯುತ್ತಿದೆ. ಡಿ.ಕೆ.ಸುರೇಶ್ ಪರ ಹೆಚ್ಚಿನ ಹಣ ಹರಿದು ಬರುತ್ತಿದೆ.
ಜೆಡಿಎಸ್ ಪಕ್ಷಕ್ಕೆ ಆನೇಕಲ್, ಚನ್ನಪಟ್ಟಣ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಎಷ್ಟು ಮತಗಳು ಬರಲಿವೆ ಎಂದು ಬೆಟ್ಟಿಂಗ್ ನಡೆಯುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3 ರಿಂದ 5 ಕೋಟಿ ರೂ. ಬೆಟ್ಟಿಂಗ್ ನಡೆಯುತ್ತಿದ್ದು, ಕ್ಷೇತ್ರದ ತುಂಬಾ ಸುಮಾರು 50 ಕೋಟಿ ಬೆಟ್ಟಿಂಗ್ ನಡೆದಿದೆ ಎಂದು ಅಂದಾಜಿಸಲಾಗಿದೆ.
ಶನಿವಾರ ಉಭಯ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು ಗೆಲ್ಲುವ ಅಭ್ಯರ್ಥಿ ಯಾರು ಎಂದು ತಿಳಿಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ದೊರಕಲಿದೆ.












Click it and Unblock the Notifications