40 ಟನ್ ಈರುಳ್ಳಿ ತುಂಬಿದ್ದ ಲಾರಿ ಅಪಹರಿಸಿದ ಕಳ್ಳರು!

ಭಾನುವಾರ ಜೈಪುರ-ದೆಹಲಿ ಹೆದ್ದಾರಿಯಲ್ಲಿ ಜೈಪುರದಿಂದ 40 ಟನ್ ಈರುಳ್ಳಿ ತೆಗೆದುಕೊಂಡು ಹೋಗುತ್ತಿದ್ದ ಲಾರಿಯನ್ನು, ಮೂವರು ಶಸ್ತ್ರ ಸಜ್ಜಿತ ದರೋಡೆಕೋರರು ತಡೆದಿದ್ದಾರೆ. ಗನ್ ತೋರಿಸಿ ಡ್ರೈವರ್ ಮತ್ತು ಕ್ಲೀನರ್ ಗೆ ಬೆದರಿಕೆ ಹಾಕಿ ಲಾರಿಯನ್ನು ಅಪಹರಿಸಿದ್ದಾರೆ.
ಘಟನೆಯಿಂದ ಗಾಬರಿಗೊಂಡ ಟಾಟಾ 907 ಲಾರಿಯ ಡ್ರೈವರ್ ಮಿಂಟು ಮತ್ತು ಕ್ಲೀನರ್ ರಿಂಕು ತಕ್ಷಣ ಹತ್ತಿರವಿದ್ದ ಪೊಲೀಸ್ ಚೌಕಿಗೆ ದೂರು ನೀಡಿದ್ದಾರೆ. ಘಟನೆಯ ವಿವರ ಕೇಳಿ ಪೊಲೀಸರು ಒಮ್ಮೆ ಬೆಚ್ಚಿಬಿದ್ದರೂ ನಂತರ, ಲಾರಿ ಹುಡುಕಾಟದಲ್ಲಿ ತೊಡಗಿದರು.
ತಕ್ಷಣ ಪೊಲೀಸರು ವೈರ್ ಲೆಸ್ ಮೂಲಕ ಹೆದ್ದಾರಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಘಟನೆಯ ಮಾಹಿತಿ ನೀಡಿ, ಲಾರಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. ಸತತ ಎರಡು ಗಂಟೆಗಳ ಹುಡುಕಾಟದ ನಂತರ, ಲಾರಿ ಕೊಟ್ ಪುಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.
ಮಳೆ ಕೈ ಕೊಟ್ಟಿತು : ಲಾರಿ ಅಪಹರಿಸಿದ ಕಳ್ಳರಿಗೆ ಮಳೆ ಸರಿಯಾಗಿ ಕೈ ಕೊಟ್ಟಿತ್ತು. ಭಾರೀ ಮಳೆ ಸುರಿಯುತ್ತಿದ್ದುದ್ದರಿಂದ ಕಳ್ಳರು ಲಾರಿಯಲ್ಲಿದ್ದ 40 ಟನ್ ಈರುಳ್ಳಿಯನ್ನು ಸಾಗಿಸಲು ಅವಕಾಶ ದೊರಕಿಲ್ಲ. ಆದ್ದರಿಂದ ಲಾರಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯ ಕುರಿತು ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಶಹಾಪುರ ಠಾಣೆಯಿಂದ ಸೋಮವಾರ ಸಂಜೆ ಈರುಳ್ಳಿ ತುಂಬಿದ ಲಾರಿಯನ್ನು ಬಿಡುಗಡೆ ಮಾಡಲಾಗಿದೆ. ಚಾಲಕ ಮತ್ತು ಕ್ಲೀನರ್ ತಮ್ಮ ದಾರಿ ಹಿಡಿದಿದ್ದಾರೆ.
ಅಂದಹಾಗೆ, ಜೈಪುರದಲ್ಲಿ ಈರುಳ್ಳಿ ಬೆಲೆ 75 ರಿಂದ 80 ರೂ. ಇದೆ. 40 ಟನ್ ಈರುಳ್ಳಿ ಕದ್ದು ಭರ್ಜರಿ ದುಡ್ಡು ಮಾಡಬಹುದು ಎಂದು ಕಳ್ಳತನಕ್ಕೆ ಕೈ ಹಾಕಿದ್ದ ದರೋಡೆಕೋರರಿಗೆ ಮಳೆಯಿಂದಾಗಿ ತೀವ್ರ ನಿರಾಸೆ ಉಂಟಾಗಿದೆ.












Click it and Unblock the Notifications