ಮತ್ತೆ ಕಣ್ಣೀರು ಹರಿಸಿದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಗೆ ನಾಲ್ಕೈದು ದಿನ ಬಾಕಿಯಿರುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ, ತಮ್ಮ ಪತ್ನಿ ಅನಿತಾ ಪರ ಪ್ರಚಾರ ನಡೆಸಿದಾಗ ಉಮ್ಮಳಿಸಿಬಂದ ದುಃಖವನ್ನು ತಡೆಯಲಾಗದೆ ಕಣ್ಣೀರಧಾರೆಯಾದರು.
ನಂತರ ಸಾವರಿಸಿಕೊಂಡು 'ನಾನು ಅಳುವಹಾಗೂ ಇಲ್ಲ. ಕೆಲ ಜನ ಅದಕ್ಕೆ ಶ್ಯಾನೆ ವಿಪರೀತ ಅರ್ಥ ಕಲ್ಪಿಸುತ್ತಾರೆ' ಎಂದು ಹೇಳುತ್ತಲೇ ಭಾವುಕರಾಗಿ ಮತ್ತೆ ಕಣ್ಣೀರಾದರು. ಪಕ್ಕದಲ್ಲೇ ಇದ್ದ ಮಧು ಬಂಗಾರಪ್ಪ ಅವರು ತಮ್ಮ ನಾಯಕ ಕಣ್ಣೀರು ಹಾಕುತ್ತಿರುವುದನ್ನು ಕಂಡು ವಿಚಲಿತರಾದಂತೆ ಕಂಡುಬಂದರು. ನಂತರ ಕುಮಾಸ್ವಾಮಿಯನ್ನು ಸಮಾಧಾನ ಪಡಿಸುವ ಕೈಂಕರ್ಯದಲ್ಲಿ ತೊಡಗಿದರು.
ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ಶ್ರಾವಣ ಶುಕ್ರವಾದಂದು ಈ ಘಟನೆ ನಡೆಯಿತು. ಪತ್ನಿ ಅನಿತಾರ ಪರ ಮತಯಾಚನೆ ಮಾಡಿದ ಕುಮಾರಸ್ವಾಮಿ ಅವರು 'ರಾಮನಗರ ಜಿಲ್ಲೆಗೆ ಡಿಕೆ ಶಿವಕುಮಾರ್ ಕೊಡುಗೆ ಏನು ಎಂದು ಮೊದಲು ಹೇಳಲಿ, ನಂತರ ದೇವೇಗೌಡರ ಕುಟುಂಬ ಜಿಲ್ಲೆಗೆ ಏನು ಮಾಡಿದೆ ಎಂದು ಕೇಳಲಿ' ಎಂದು ತಿರುಗೇಟು ನೀಡಿದರು.
ಭಾಷಣ ವೇಳೆ ರಾಜಕೀಯ ಬೆಳವಣಿಗೆ, ಕ್ಷೇತ್ರದಲ್ಲಿನ ಜನರ ಬೆಂಬಲ ನೆನೆದು ಕುಮಾರಸ್ವಾಮಿ ಭಾವುಕರಾದರು. ಜನರ ಅಭಿಮಾನ ಕೆಲವು ವೇಳೆ ಕಣ್ಣೀರು ತರಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications