ಉಪ ಚುನಾವಣೆ : 2 ಕೋಟಿ ಅಕ್ರಮ ಹಣ ವಶ

ಶನಿವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಬೆಂಗಳೂರು ದಕ್ಷಿಣ ವಿಧಾನಸಭೆ ವ್ಯಾಪ್ತಿಯ ಪಟಾಲಮ್ಮ ಗುಡಿ ಚೆಕ್ ಪೋಸ್ಟ್ ನಲ್ಲಿ, ಟಾಟಾ ಸುಮೋವನ್ನು ಪರಿಶೀಲನೆ ನಡೆಸಿದ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡು, ಸುಮೋ ಚಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಈ ಹಣವನ್ನು ತೆಗೆದುಕೊಂಡು ಹೋಗುತ್ತಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ. ತುಮಕೂರು ಕಡೆಯಿಂದ ನಾವು ಆಗಮಿಸುತ್ತಿದ್ದೇವೆ ಎಂದು ಬಂಧಿತರು ಸುಬ್ರಮಣ್ಯಪುರ ಪೊಲೀಸರಿಗೆ ಹೇಳಿದ್ದಾರೆ.
2 ಕೋಟಿ ಹಣ : ಟಾಟಾ ಸುಮೋದ ಹಿಂದನ ಸೀಟಿನ ಅಡಿಯಲ್ಲಿ ನಾಲ್ಕು ಪ್ಲಾಸ್ಟಿಕ್ ಕವರ್ ಗಳಲ್ಲಿ ಹಣವನ್ನು ಬಚ್ಚಿಡಲಾಗಿತ್ತು. ಈ ಹಣಕ್ಕೆ ಟಾಟಾ ಸುಮೋದಲ್ಲಿದ್ದ ಜನರ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. 500 ಮತ್ತು 1000ರ ನೋಟುಗಳನ್ನು ಎಣಿಸಿರುವ ಪೊಲೀಸರು 2.21 ಕೋಟಿ ಹಣವಿತ್ತು ಎಂದು ಹೇಳಿದ್ದಾರೆ.
ಟಾಟಾ ಸುಮೋ ಚಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಪೊಲೀಸರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರ ಇದು ಯಾವ ಹಣ ಎಂದು ತಿಳಿದು ಬರಲಿದೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆ ನಡೆಯುತ್ತಿದ್ದು, ಮತದಾರರಿಗೆ ಹಂಚಲು ಹಣವನ್ನು ಸಾಗಿಸಲಾಗುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications