ಅಪವಿತ್ರ ಮೈತ್ರಿ: ಜೆಡಿಎಸ್ಸಿಗೆ ನಾರಾಯಣಸ್ವಾಮಿ ಗುಡ್ ಬೈ
ಬೆಂಗಳೂರು, ಆಗಸ್ಟ್ 14: ಇತ್ತ ಕೆಜೆಪಿ/ಬಿಜೆಪಿ/ಜೆಡಿಎಸ್ ಪಕ್ಷಗಳು ಚುನಾವಣೆ ಸಮ್ಮುಖದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಳ್ಳುತ್ತಾ ಪ್ರಜ್ಞಾವಂತ ಮತದಾರರ ಎದುರು ನಗೆಪಾಟಲಿಗೀಡಾಗುತ್ತಿರುವ ಸಂದರ್ಭದಲ್ಲೇ ಅದೇ ಪಕ್ಷವೊಂದರ ಪ್ರಜ್ಞಾವಂತ ನಾಯಕರೊಬ್ಬರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಮೃದುಭಾಷಿ, ನ್ಯಾಯವಾದಿ, ಮಾಜಿ ಎಂಪಿ, ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಸಿ ನಾರಾಯಣಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ತೊರೆದಿದ್ದಾರೆ. ಪಂಚಾಯತ್ ರಾಜಕಾರಣದಿಂದ ರಾಜಕೀಯದಲ್ಲಿ ಮೇಲಕ್ಕೆ ಬಂದಿರುವ ದೇವನಹಳ್ಳಿಯ ನಾರಾಯಣಸ್ವಾಮಿ (66) ಅವರು ಇತ್ತೀಚೆಗೆ ತಮ್ಮ ಪಕ್ಷವು ಬಿಜೆಪಿ ಜತೆ 'ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್'ಗೆ ಶರಣಾಗಿರುವುದರಿಂದ ಮುಜುಗುರಕ್ಕೀಡಾಗಿದ್ದು, ಜಾತ್ಯಾತೀತ ಜನತಾ ದಳವನ್ನು ತೊರೆದಿದ್ದಾರೆ.

ನಿನ್ನೆ ಮಂಗಳವಾರ ನಾರಾಯಣಸ್ವಾಮಿ ಅವರು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ಜತೆಗಿನ 36 ವರ್ಷಗಳ ಬಾಂಧವ್ಯಕ್ಕೆ ತಿಲಾಂಜಲಿಯಿಟ್ಟು ನಾಳೆ ಸ್ವಾತಂತ್ರ್ಯ ದಿನದಂದು ಕಾಂಗ್ರೆಸ್ ಸೇರುತ್ತಿರುವುದಾಗಿಯೂ ನಾರಾಯಣಸ್ವಾಮಿ ತಿಳಿಸಿದ್ದಾರೆ.
ನನ್ನದು ಮೊದಲಿಂದಲೂ ಜಾತ್ಯಾತೀತ ನಿಲುವು. ಆದರೆ ಜೆಡಿಎಸ್ ಪಕ್ಷದಲ್ಲಿ ಈಗ ಜಾತ್ಯಾತೀತ ಸಿದ್ಧಾಂತ ಕಾಣೆಯಾಗಿದೆ. ಅದು ಇತ್ತೀಚೆಗೆ ಬಿಜೆಪಿ ಜತೆ ಕೈಜೋಡಿಸಿದ್ದು ನನಗೆ ತುಂಬಾ ನೋವು ತಂದಿದೆ. ಜೆಡಿಎಸ್ ಈಗ ಬಿಜೆಪಿ ಅಡ ಇಟ್ಟಂತಾಗಿದೆ. ಹಾಗಾಗಿ ನಾಳೆ ಮಾಜಿ ಸ್ಪೀಕರ್ ಕೆಆರ್ ಪೇಟೆ ಕೃಷ್ಣ ಜತೆಗೂಡಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿರುವುದಾಗಿ ನಾರಾಯಣಸ್ವಾಮಿ ಘೋಷಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾಗಿಯೂ, ಅದೇ ವೇಳೆ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಹಸ್ತಾಂತರಿಸಿರುವುದಾಗಿಯೂ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ನಾರಾಯಣಸ್ವಾಮಿ ಅವರು ಸಂಸತ್ತಿಗೆ ಆಯ್ಕೆಯಾಗಿದ್ದರು. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನ ಮೊದಲ ಅಧ್ಯಕ್ಷರೂ ಆಗಿದ್ದರು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications