ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರು ಸಿದ್ಧ
ಬೆಂಗಳೂರು, ಆ.13 : 67ನೇ ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನ ಸಜ್ಜಾಗಿದೆ. ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಮೀನಾರಾಯಣ್ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮೀನಾರಾಯಣ್, ಆ.15ರಂದು ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸ್ವಾತಂತ್ರ್ಯೋತ್ಸವ ಪಥ ಸಂಚಲನದಲ್ಲಿ ಈ ಬಾರಿ ಹೆಚ್ಚು ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ಮೊಲದ ಬಾರಿಗೆ 2,600 ಮಕ್ಕಳು ಪಥ ಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು. ಬಿಬಿಎಂಪಿ ಶಾಲಾ ಮಕ್ಕಳು ಸೇರಿದಂತೆ ಹೆಚ್ಚು ಮಕ್ಕಳು ಬ್ಯಾಂಡ್ ಸೆಟ್ ಮೂಲಕ ಪಥ ಸಂಚಲನ ನಡೆಸಲಿದ್ದಾರೆ ಎಂದರು.
ಸ್ವಾತಂತ್ರ್ಯೋತ್ಸವ ವೀಕ್ಷಣೆಗಾಗಿ ಸೇನಾಧಿಕಾರಿಗಳಿಗೆ ಮತ್ತು ಅತಿ ಗಣ್ಯ ವ್ಯಕ್ತಿಗಳಿಗೆ 2000 ಆಸನಗಳನ್ನು ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಯೋಧರು, ಬಿಎಸ್‌ಎಫ್ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ 3,500 ಆಸನಗಳನ್ನು ಮೀಸಲಿಡಲಾಗಿದೆ ಎಂದರು.
ಕಿಕ್ಕೇರಿ ಕೃಷ್ಣಮೂರ್ತಿ ಅವರ ನಾಡ ಗೀತೆ ಮತ್ತು ರೈತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಥಣಿಸಂದ್ರ ಸರ್ಕಾರಿ ಶಾಲೆಯ 650 ಮಕ್ಕಳು ಜನ್ಮಭೂಮಿ ನೃತ್ಯ ಪ್ರದರ್ಶಿಸಲಿದ್ದಾರೆ. ಬಾಗಲೂರಿನ ಜವಾಹರ್ ನವೋದಯ ವಿದ್ಯಾಲಯದ 600 ಮಕ್ಕಳು ಸ್ವಾತಂತ್ರ್ಯ ಸಂಗ್ರಾಮ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಬಿಎಂಪಿಯ 6೦೦ ಶಾಲಾ ಮಕ್ಕಳು ಪುಣ್ಯಭೂಮಿ ಭಾರತ ಹಾಗೂ ಬೆಳಗಾವಿಯ ಮರಾಠಾ ಲೈಟ್ ಇನ್‌ಫಂಟ್ರಿ ರೆಜಿಮೆಂಟ್‌ನ ಯೋಧರು ಮಲ್ಲಕಂಬ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಪೊಲೀಸ್ ಕವಾಯತಿನಲ್ಲಿ ಪೊಲೀಸರು ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಸೇನಾದಳ ಹಾಗೂ ಶಾಲಾ ಮಕ್ಕಳು ಸೇರಿದಂತೆ 26 ತುಕಡಿಗಳ 2 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸೂಕ್ತ ವ್ಯವಸ್ಥೆ : ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಯಾವುದೇ ವಿಪತ್ತು ಸಂಭವಿಸಿದಲ್ಲಿ ನೆರವಾಗಲು 20 ಆಂಬುಲೆನ್ಸ್, 50 ವೈದ್ಯರನ್ನೊಳಗೊಂಡ 150 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರದ 28 ಆಸ್ಪತ್ರೆಗಳಲ್ಲಿ, 120 ಹಾಸಿಗೆ ಮತ್ತು 150 ವೈದ್ಯರು ಸೇರಿದಂತೆ 320 ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ರಕ್ಷಣಾ ವ್ಯವಸ್ಥೆ : ಸ್ವಾತಂತ್ರ್ಯ ದಿನಾಚರಣೆಗಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. 1,200 ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಮೂವರು ಜಂಟಿ ಪೊಲೀಸ್ ಆಯುಕ್ತರು, 9 ಮಂದಿ ಡಿಸಿಪಿಗಳು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದರು. ಮಾಣಿಕ್ ಷಾ ಪೆರೆಡ್ ಮೈದಾನದ ಸುತ್ತಾ, 23 ಮೆಟಲ್ ಡಿಕೆಕ್ಟರ್ ಆಳವಡಿಸಲಾಗಿದೆ. ಮೈದಾನದ ಸುತ್ತಾ 40 ಸಿಸಿಟಿವಿ ಆಳವಡಿಸಲಾಗಿದೆ ಎಂದರು.
ಪ್ರತಿಯೊಬ್ಬರು ಪಾಸ್ ಮತ್ತು ಗುರುತಿನ ಚೀಟಿ ಹೊಂದಿರಬೇಕು. ಪಟಾಕಿ, ಹೆಲ್ಮೆಟ್, ನೀರಿನ ಬಾಟಲಿ, ಮೊಬೈಲ್ ಫೋನ್ ಮುಂತಾದವುಗಳನ್ನು ನಿಷೇಧಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಪೊಲೀಸರ ಭದ್ರತಾ ತಪಾಸಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications