ಮೋದಿ ಭಾಷಣ ಪ್ರತಿಧ್ವನಿಸಲಿವೆ ಬೆಂಗಳೂರ ಬಂಡೆಗಳು
ಬೆಂಗಳೂರು, ಆ. 10 : ಹೈದರಾಬಾದ್‌ನ ಲಾಲ್ ಬಹಾದ್ದೂರ್ ಕ್ರೀಡಾಂಗಣದಲ್ಲಿ ಆ.11ರ ಭಾನುವಾರ ಮಧ್ಯಾಹ್ನ, ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರು ಮಾಡಲಿರುವ ಪ್ರಖರ ಭಾಷಣ ಬೆಂಗಳೂರಿನಲ್ಲಿರುವ ಬಂಡೆಬಂಡೆಗಳು ಪ್ರತಿಧ್ವನಿಸಲಿವೆ.

ಜುಲೈ 14ರಂದು ಆರಂಭವಾದ ಬೆಂಗಳೂರಿನ ನಮೋ ಬ್ರಿಗೇಡ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಭಾಷಣವನ್ನು ನೇರವಾಗಿ ಪ್ರಸಾರ ಮಾಡಲಿದೆ. ಲೈವ್ ಸ್ಟ್ರೀಮಿಂಗ್ ಮುಖಾಂತರ ಪ್ರಸಾರವಾಗುತ್ತಿರುವ ನರೇಂದ್ರ ಮೋದಿ ಅವರ ಭಾಷಣವನ್ನು ಬೆಂಗಳೂರಿನ ಜನತೆ ನೇರವಾಗಿ ಕೇಳಬಹುದು ಮತ್ತು ನೋಡಬಹುದು.
ಬೆಂಗಳೂರು ನಮೋ ಬ್ರಿಗೇಡ್‌ನ ಯುವ 'ವತ್ತಿಪರ' ಸ್ವಯಂಸೇವಕರು ಮೋದಿ ಅವರ ಭಾಷಣವನ್ನು ದೊಡ್ಡ ಪರದೆಯ ಮೇಲೆ ಬಿತ್ತರಿಸಲಿದ್ದಾರೆ. ಇದಕ್ಕಾಗಿ ಸರ್ವ ಸಿದ್ಧತೆಗಳು ನಡೆದಿದ್ದು, ಭಾರೀ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕ್‌ನಲ್ಲಿ ನೆರೆಯುವ ಸಾಧ್ಯತೆಯಿದೆ.
ಭಾನುವಾರ ನಾಗರಪಂಚಮಿ ಹಬ್ಬವೂ ಇರುವುದರಿಂದ ಮನೆಯಲ್ಲಿ ನಾಗಪ್ಪನಿಗೆ ಹಾಲು ಎರೆದು, ತಂಬಿಟ್ಟು, ಚಕ್ಕುಲಿ, ಹಚ್ಚಿದ ಅವಲಕ್ಕಿ ತಿಂದು ದೊಡ್ಡಗಣಪನ ಆಶೀರ್ವಾದ ಪಡೆಯಬಹುದು. ಸಾಧ್ಯವಾದರೆ ಅಲ್ಲಿ ನೆರೆದಿರುವ ಜನರಿಗೂ ಒಂದು ಸಿಹಿ ತಂಬಿಟ್ಟು ಮತ್ತು ಖಾರದ ಚಕ್ಕುಲಿ ಹಂಚಿ, ಪಕ್ಕದಲ್ಲೇ ಇರುವ ಬಸವಣ್ಣ ಕೃಪೆಗೂ ಪಾತ್ರರಾಗಬಹುದು.
ಮುಂಬರುವ ವಿಧಾನಸಭೆ ಚುನಾವಣೆ ಜಯಭೇರಿ ಬಾರಿಸಬೇಕು ಮತ್ತು ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರವನ್ನು ಮರಳಿಪಡೆಯಬೇಕು ಎಂಬ ಉದ್ದೇಶದಿಂದ www.india272.com ವೆಬ್ ಸೈಟ್ ಆರಂಭವಾಗಿದ್ದು, ಹೈದರಾಬಾದಿನಲ್ಲಿ 'ನವಭಾರತ ಯುವಭೇರಿ' ಚುನಾವಣಾ ಅಭಿಯಾನಕ್ಕೆ ಭಾರೀ ಚಾಲನೆ ದೊರೆಯಲಿದೆ. ಮಧ್ಯಾಹ್ನ 3 ಗಂಟೆಯ ನಂತರ ಭಾಷಣ ಆರಂಭವಾಗಲಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications