ಕಾಂಗ್ರೆಸ್-ಜೆಡಿಎಸ್ ಕದನಕ್ಕೆ ವೇದಿಕೆ ಸಜ್ಜು
ಬೆಂಗಳೂರು, ಆ.8 : ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಉಭಯ ಕ್ಷೇತ್ರದಲ್ಲೂ ನಾಮಪತ್ರ ಹಿಂಪಡೆದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ನೆರವಾಗಿದೆ.
ಬುಧವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ದೊರೆಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಎಂ.ಕೃಷ್ಣಪ್ಪ ತಮ್ಮ ನಾಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಆದರೆ, ಇದು ಜೆಡಿಎಸ್ ಜೊತೆಗಿನ ಮೈತ್ರಿಯಿಂದಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಮಂಡ್ಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕೆ.ಎಸ್.ನಂದಿನಿ ಜಯರಾಂ ಅವರ ಮನವೊಲಿಸಿ ಅವರ ನಾಮಪತ್ರ ಹಿಂಪಡೆದು, ಕಾಂಗ್ರೆಸ್ ಬೆಂಬಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರಿಂದ ನಟಿ ರಮ್ಯಾ ಅವರ ಗೆಲುವಿಗೆ ಕೊಂಚ ಸಹಕಾರ ದೊರೆಯಬಹುದು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಪ್ರಬಲ ಪೈಪೋಟಿ ಎಂದು ಬಣ್ಣಿಸಲಾಗುತ್ತಿರುವ ಉಪ ಚುನಾವಣಾ ಕಣ ರಂಗೇರಿದೆ. ಗುರುವಾರಿದಿಂದ ಪ್ರಚಾರ ಕಾರ್ಯಗಳು ಆರಂಭವಾಗಲಿದೆ. ಚುನಾವಣಾ ಕಣದ ಸಂಪೂರ್ಣ ವಿವರ ಹೀಗಿದೆ.

ಬಿಜೆಪಿ-ಜೆಡಿಎಸ್ ರಹಸ್ಯ ಒಳ ಒಪ್ಪಂದ
ಬಹಿರಂಗವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮಾತುಕತೆ ತಳ್ಳಿ ಹಾಕಿದರೂ, ರಹಸ್ಯವಾಗಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬುದು ಸತ್ಯ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಜೆಡಿಎಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ.

ಕಣದಲ್ಲಿರುವ ಕಲಿಗಳು
ಬುಧವಾರ ನಾಮಪತ್ರ ಹಿಂಪಡೆದ ನಂತರ ಮಂಡ್ಯದಲ್ಲಿ 9 ಮಂದಿ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 13 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಪ್ರಬಲ ಪೈಪೋಟಿ ಏರ್ಪಡಲಿದೆ ಉಳಿದವರು, ಮತಗಳನ್ನು ವಿಭಜಿಸಬಹುದು.

ಕುಮಾರಸ್ವಾಮಿ ಪ್ರತಿಷ್ಠೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವುದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಪ್ರಶ್ನೆ. ಡಿ.ಕೆ.ಶಿವಕುಮಾರ್ ಸಹೋದರೆ ಡಿ.ಕೆ.ಸುರೇಶ್ ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು.

ಮಂಡ್ಯ ಕ್ಷೇತ್ರದ ಅಂತಿಮ ಅಭ್ಯರ್ಥಿಗಳು
ಕಾಂಗ್ರೆಸ್ - ರಮ್ಯಾ
ಜೆಡಿಎಸ್- ಸಿ.ಎಸ್. ಪುಟ್ಟರಾಜು
ಆರ್ ಪಿಐ - ಕೃಷ್ಣಮೂರ್ತಿ
ಪಕ್ಷೇತರರು : ಐ.ಎನ್.ಆರ್.ಗೌಡ ನಂದೀಶ್, ಸಿ.ಟಿ.ಮಂಜುನಾಥ್, ಶಂಭುಲಿಂಗೇಗೌಡ, ಅರುಣ್‌ಕುಮಾರ್, ಎಸ್.ವಸಂತಕುಮಾರ್, ವಿ.ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರ
ಕಾಂಗ್ರೆಸ್ -ಡಿ.ಕೆ.ಸುರೇಶ್
ಜೆಡಿಎಸ್- ಅನಿತಾ ಕುಮಾರಸ್ವಾಮಿ
ಆರ್ ಪಿಐ - ಕುಣಿಗಲ್ ಶಿವಣ್ಣ
ಜೆಡಿಯು-ಜೆ.ಟಿ.ಪ್ರಕಾಶ್
ಕರುನಾಡ ಪಾರ್ಟಿ - ಬೂದಯ್ಯ ಬಿ.ಪೂಜಾರಿ
ಕಾಮರಾಜರ್ ದೇಶಿಯ ಕಾಂಗ್ರೆಸ್- ಕೆ.ಎ.ಮೋಹನ್
ಪಕ್ಷೇತರರು : ಕಾಳಯ್ಯ, ಎ.ಚೌರಪ್ಪ , ಜೆ.ನಟರಾಜು, ಮಲ್ಲೇಶ್, ಮಾಡಬಾಳ್ ಜಯರಾಂ, ಟಿ.ಎಂ.ಮಂಜೇಗೌಡ, ಎಸ್.ಸಿದ್ದರಾಮಯ್ಯ ಹೆಗ್ಗಡೆ.

ಚುನಾವಣೆ ವೇಳಾಪಟ್ಟಿ
ಆಗಸ್ಟ್ 21ರ ಬುಧವಾರ - ಮತದಾನ
ಆಗಸ್ಟ್ 24ರ ಶನಿವಾರ - ಮತ ಎಣಿಕೆ












Click it and Unblock the Notifications