ಚುನಾವಣೆಗೆ ಸ್ಪರ್ಧಿಸಲು ರಮ್ಯಾಗೆ ಉತ್ಸಾಹವಿಲ್ಲ?

ರಮ್ಯಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನವೇ ಸಾಕು ತಂದೆ ಆರ್.ಟಿ.ನಾರಾಯಣ್ ನಿಧನದ ಆಘಾತದ ಉಂಟಾದ ಹಿನ್ನೆಲೆಯಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ನಟಿ ರಮ್ಯಾ ಹಿಂದೇಟು ಹಾಕಿದ್ದರು. ಆದರೆ, ಕಾಂಗ್ರೆಸ್‌ನ ಹಿರಿಯರು ಅವರ ಮನವೊಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಾಕು ತಂದೆ ಸಾವನ್ನಪ್ಪಿರುವ ದುಃಖದಲ್ಲಿರುವ ರಮ್ಯಾ ಕಣದಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದರು. ಇಂಥ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲವೆಂದು ನೋವು ತೋಡಿಕೊಂಡರು ಎನ್ನುತ್ತಿವೆ ಮೂಲಗಳು. (ರಮ್ಯಾ ಸಾಕುತಂದೆ ಹಠಾತ್ ಸಾವು)
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಸತಿ ಸಚಿವ ಅಂಬರೀಶ್, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಮುಂತಾದವರು ರಮ್ಯಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ನಾಮಪತ್ರ ಹಿಂಪಡೆಯದೆ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಯಿ ರಂಜಿತಾ ಹಾಗೂ ಆಪ್ತರೊಂದಿಗೆ ಚುನಾವಣಾ ಕಣದಿಂದ ಹಿಂದೆ ಸರಿಯುವ ಕುರಿತು ಚರ್ಚಿಸಿದ ರಮ್ಯಾ, ಕಣದಿಂದ ಹಿಂದೆ ಸರಿಯುವುದಾಗಿ ಹಠ ಹಿಡಿದ್ದರು. ಆದರೆ, ಭಾನುವಾರ, ಕಾಂಗ್ರೆಸ್ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧೈರ್ಯ ತುಂಬಿದ ಅಂಬರೀಶ್ : ವಸತಿ ಸಚಿವ ಅಂಬರೀಶ್ ಪ್ರೀತಿ ಪಾತ್ರ ತಂದೆಯ ಹಾರೈಕೆಯಿಂದ ತಾವು ಈ ಚುನಾವಣೆಯಲ್ಲಿ ಜಯ ಗಳಿಸಲಿದ್ದು, ಜನಸೇವೆ ಮಾಡುವ ಅವಕಾಶ ದೊರೆಯಲಿದೆ. ಆದ್ದರಿಂದ ಚುನಾವಣೆ ಅಖಾಡದಿಂದ ಹಿಂದೆ ಸರಿಯಬಾರದು ಎಂದು ರಮ್ಯಾ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಮ್ಯಾ ಅನಿವಾರ್ಯ : ರಮ್ಯಾ ಅವರ ಮನವೊಲಿಸುವುದು ಕಾಂಗ್ರೆಸ್ ಪಾಲಿಗೆ ಅನಿವಾರ್ಯವಾಗಿದೆ. ಏಕೆಂದರೆ ಪಕ್ಷದಿಂದ ಬೇರೆ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು, ಕಣದಿಂದ ಹಿಂದೆ ಸರಿದರೆ ಪಕ್ಷಕ್ಕೆ ಮುಜುಗರವಾಗುವುದು ಖಂಡಿತ.
ಹಿರಿಯ ಕಾಂಗ್ರೆಸ್ ಮುಖಂಡರು ಎಲ್ಲಾ ಸಾಧ್ಯತೆಗಳನ್ನು ರಮ್ಯಾ ಅವರಿಗೆ ವಿವರಿಸಿ, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದ್ದಾರೆ. ರಮ್ಯಾ ಸಹ ನಾಯಕರ ಮಾತಿಗೆ ಮನ್ನಣೆ ನೀಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಭರವಸೆ ನೀಡಿದ್ದಾರೆ. (ಉಪ ಚುನಾವಣೆ ಹೋರಾಟಕ್ಕೆ ವೇದಿಕೆ ಸಜ್ಜು)












Click it and Unblock the Notifications