ಐದು ನಗರಗಳು ಸೇಫ್ ಸಿಟಿಯಾಗಲಿವೆ : ಸಿಎಂ

ಬೆಂಗಳೂರಿನಲ್ಲಿ ಸೋಮವಾರ 'ನೈಸರ್ಗಿಕ ದುರಂತಗಳನ್ನು ತಡೆಗಟ್ಟುವ' ಬಗ್ಗೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ನಗರಗಳ ಒತ್ತಡವನ್ನು ಕಡಿಮೆ ಮಾಡಲಾಗುವುದು ಎಂದರು.
ಎಲ್ಲಾ ನಗರಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ವಿಶೇಷ ಒತ್ತುನೀಡಿ ಅವುಗಳನ್ನು ಸೇಫ್ ಸಿಟಿಯಾಗಿ ಪರಿವರ್ತಿಸಲಾಗುವುದು ಎಂದು ಸಿಎಂ ಹೇಳಿದರು.
ಐದು ನಗರಗಳ ಅಭಿವೃದ್ಧಿಗಾಗಿ ಸರ್ಕಾರ 150 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಮೀಸಲಾಗಿಟ್ಟಿದೆ. ಈ ಅನುದಾನದಲ್ಲಿ ನಗರಗಳಿಗೆ ಮೂಲಭೂತ ಸೌಲಭ್ಯಗಳನ್ನು ಸೇಫ್ ಸಿಟಿ ಯೋಜನೆಯಡಿ ಒದಗಿಸಿ, ಅಭಿವೃದ್ಧಿಗೊಳಿಸಲಾಗುವುದು ಎಂದರು.
ರಸ್ತೆ, ಒಳಚರಂಡಿ, ಕಸದ ಸಮಸ್ಯೆ ನಿವಾರಣೆ, ನಗರಗಳ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ಈ ಅನುದಾನ ಬಳಸಲಾಗುವುದು. ಐದು ವರ್ಷಗಳಲ್ಲಿ ಈ ಯೋಜನೆ ಮುಗಿದು ಐದು ನಗರಗಳು ಸೇಫ್ ಸಿಟಿಯಾಗಿ ಪರಿವರ್ತನೆಗೊಳ್ಳಲಿವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿದರೆ ಜನರು ನಗರಗಳತ್ತ ವಲಸೆ ಬರುವುದು ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಗ್ರಾಮಗಳಿಗೂ ಆದ್ಯತೆಯ ಮೇಲೆ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ನೀಡಲಾಗುವುದು ಎಂದರು.












Click it and Unblock the Notifications