ದುರ್ಗಾಶಕ್ತಿ ಅಮಾನತು, ಅಖಿಲೇಶ್ ಗೆ ನೋಟಿಸ್
ಲಕ್ನೋ, ಆ.2: ದಕ್ಷ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅವರ ಅಮಾನತು ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ಲಕ್ನೋ ಬೆಂಚ್ ಶುಕ್ರವಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣ ಕುರಿತ ಮುಂದಿನ ವಿಚಾರಣೆ ಆ.19ಕ್ಕೆ ಮುಂದೂಡಲಾಗಿದೆ. ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅವರನ್ನು ಜು.27ರಂದು ಅಖಿಲೇಶ್ ಯಾದವ್ ಅವರ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.

ದುರ್ಗಾಶಕ್ತಿ ಅವರು ಮುಸ್ಲಿಮರ ಪ್ರಾರ್ಥನಾ ಮಂದಿರದ ಗೋಡೆಯನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿತ್ತು. 2010ರ ಬ್ಯಾಚಿನ ಉತ್ತರಪ್ರದೇಶದವರೇ ಆದ ಐಎಎಸ್ ಅಧಿಕಾರಿ ದುರ್ಗಾ ಅವರು ಸುಪ್ರೀಂಕೋರ್ಟ್ ನಿಯಮದ ಪ್ರಕಾರ ತಮ್ಮ ಕರ್ತವ್ಯ ಪಾಲಿಸಿದ್ದರು.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ಈ ಮುಂಚೆ ಆದೇಶ ನೀಡಿದೆ. ಸರ್ಕಾರಿ ಭೂ ಪ್ರದೇಶದಲ್ಲಿ ಧಾರ್ಮಿಕ ಮಂದಿರಗಳಾದ ದೇಗುಲ, ಮಸೀದಿ ಅಥವಾ ಚರ್ಚ್ ಅನಧಿಕೃತವಾಗಿ ಕಟ್ಟಿದ್ದರೆ ಅದನ್ನು ಕೂಡಾ ನೆಲಸಮ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ದುರ್ಗಾಶಕ್ತಿ ಅವರನ್ನು ಅಮಾನತುಗೊಳಿಸಿದ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ, ಬಿಎಸ್ ಪಿ ಸೇರಿದಂತೆ ಹಲವಾರು ಪಕ್ಷಗಳು ಕಿಡಿ ಕಾರಿದ್ದವು. ಐಎಎಸ್ ಅಸೋಸಿಯೇಷನ್ ಕೂಡಾ ಯಾದವ್ ಕ್ರಮವನ್ನು ಖಂಡಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು.
ಗ್ರೇಟರ್ ನೋಯ್ಡಾ ಬಳಿಯ ಗೌತಮ್ ಬುದ್ಧ ನಗರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿರುವ ಬಗ್ಗೆ ಪೂರ್ವ ಮಾಹಿತಿ ಪಡೆದು ದಾಳಿ ನಡೆಸಿದ್ದ ದುರ್ಗಾಶಕ್ತಿ ಅವರು ಫೆಬ್ರವರಿ ತಿಂಗಳಿನಿಂದ ಜುಲೈ 24ರ ವರೆಗೆ ಸುಮಾರು 54.3 ಕೋಟಿ ರು ಮೊತ್ತದ ಹಣವನ್ನು ಸರ್ಕಾರಕ್ಕೆ ಹಿಂತಿರುಗುವಂತೆ ಮಾಡಿದ್ದರು.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೋರಲಾಗಿದೆ. ಹಾಗೂ ದುರ್ಗಾಶಕ್ತಿ ಅವರು ನಡೆಸಿದ ದಾಳಿ ವಿವರಗಳನ್ನು ಕೋರ್ಟಿಗೆ ನೀಡಲಾಗಿತ್ತು. ದೇವಿ ಪ್ರಸಾದ್ ಸಿಂಗ್ ಹಾಗೂ ಜಸ್ಟೀಸ್ ಅಶೋಕ್ ಪಾಲ್ ಸಿಂಗ್ ಅವರಿದ್ದ ನ್ಯಾಯಪೀಠ ನೂತನ್ ಠಾಕರ್ ಅವರ ಅರ್ಜಿ ವಿಚಾರಣೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.












Click it and Unblock the Notifications