ಹೈ-ಕ ಭಾಗದ ಮೀಸಲಾತಿ ಮಾರ್ಗಸೂಚಿ ಸಿದ್ಧ
ಬೆಂಗಳೂರು, ಆ.1 : ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ, ದೊರೆಯಲಿರುವ ಸೌಲಭ್ಯಗಳ ಕುರಿತು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿ ವರದಿ ನೀಡಿದೆ. ವಿಧಾನಸಭೆಯ ಕೊನೆಯ ದಿನದ ಕಲಾಪದಲ್ಲಿ ವರದಿ ಮಂಡಿಸಲಾಗಿದೆ.
ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ, ವಿಶೇಷ ಕೈಗಾರಿಕಾ ಬಂಡವಾಳ ನೀತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನೀಡಬಹುದಾದ ವಿಶೇಷ ಸಹಾಯಧನ ನೀತಿಯನ್ನು ವಿಶೇಷ ಸ್ಥಾನಮಾನದ ಅಡಿ ಸರ್ಕಾರ ಪ್ರಕಟಿಸಲಿದೆ.
ಸಂಪುಟ ಉಪಸಮಿತಿ ವರದಿಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ, ಮಂತ್ರಿಪರಿಷತ್ ಒಪ್ಪಿಗೆ ಮೇಲೆ ಕೆಲವೊಂದು ಮಾರ್ಗಸೂಚಿಗಳನ್ನು ರಚಿಸಲಾಗಿದೆ. ರಾಷ್ಟ್ರಪತಿಗಳು ಅನುಮೋದನೆ ನೀಡಿದ ಬಳಿಕ ವಿಶೇಷ ಹೊಣೆಗಾರಿಕೆಯಡಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಹೈದರಾಬಾದ್-ಕರ್ನಾಟಕ ಭಾಗದ ಬಹುಜನರ ನಿರೀಕ್ಷೆಯಂತೆ ವಿಶೇಷ ಸ್ಥಾನಮಾನ ನೀಡಲು ಕ್ರಮ ಕೈಗೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಭಿನಂದಿಸಿದರು. ಸರ್ಕಾರ ರೂಪಿಸುವ ಕಾರ್ಯಕ್ರಮಗಳು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಸಲಹೆ ನೀಡಿದರು. ಸಮಿತಿ ನೀಡಿರುವ ಪ್ರಮುಖ ಮಾರ್ಗಸೂಚಿಗಳು ಹೀಗಿವೆ.

ವರದಿ ಏನು ಒಳಗೊಂಡಿದೆ
ಎಚ್.ಕೆ. ಪಾಟೀಲ್ ಉಪ ಸಮಿತಿಯ ವರದಿಯು ಸಾಮಾಜಿಕ, ಆರ್ಥಿಕ, ಮೂಲಸೌಕರ್ಯಗಳು ಮತ್ತು ಇನ್ನಿತರ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ 22 ಶಿಫಾರಸುಗಳನ್ನು ಒಳಗೊಂಡಿದೆ. ಇದನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ
ಸಿಎಂ ಸಿದ್ದರಾಮಯ್ಯ ಮಂಡಿಸಿದ ಉಪ ಸಮಿತಿ ವರದಿಯಂತೆ, ಹೈದರಾಬಾದ್-ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಶೇ.78, ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಎ ಮತ್ತು ಬಿ ವರ್ಗದಲ್ಲಿ ಶೇ.75, ಸಿ ವರ್ಗದಲ್ಲಿ ಶೇ.80, ಡಿ ವರ್ಗದ ಹುದ್ದೆಗಳಲ್ಲಿ ಶೇ.85ರಷ್ಟು ಮೀಸಲಾತಿ ಲಭ್ಯವಾಗಲಿದೆ.

ಶಿಕ್ಷಣಕ್ಕೆ ಏನು ದೊರೆಯುತ್ತದೆ
ಹೈ-ಕ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70 ರಷ್ಟು ಹಾಗೂ ರಾಜ್ಯದ ಇತರೆಡೆ ಶೇ.8 ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಹೈ-ಕ ಭಾಗದಲ್ಲಿರುವ ರಾಜ್ಯ ಸರ್ಕಾರದ ನಿಗಮ-ಮಂಡಳಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ನೇರ ನೇಮಕಾತಿ ಹಾಗೂ ಬಡ್ತಿಯಲ್ಲಿ ಶೇ.75 ರಿಂದ 85 ರಷ್ಟು ಮೀಸಲಾತಿ ದೊರೆಯಲಿದೆ.

ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆ
ಹೈದರಾಬಾದ್-ಕರ್ನಾಟಕ ಪ್ರದೇಶದ ವಿಶೇಷ ಹೊಣೆಗಾರಿಕೆಗೆ ಸಂಬಂಧಿಸಿದಂತೆ, ರಾಷ್ಟ್ರಪತಿಗಳಿಂದ ಆದೇಶ ನಿರೀಕ್ಷಿಸಲಾಗುತ್ತಿದೆ. ನಂತರ 'ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ' ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡಳಿಯಲ್ಲಿ ಜನಪ್ರತಿನಿಧಿಗಳು
ಹೈ-ಕ ಭಾಗದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಅಭಿವೃದ್ಧಿ ಮಂಡಳಿ ಸದಸ್ಯರಾಗಿರುತ್ತಾರೆ. ಪ್ರದೇಶಕ್ಕೆ ಅಗತ್ಯವಿರುವ ನೀತಿ ನಿಯಮಗಳ ಬಗ್ಗೆ ಸಲಹೆ ನೀಡುವ ಕೆಲಸವನ್ನು ಮಂಡಳಿ ಮಾಡಲಿದೆ.

ರಾಜ್ಯಪಾಲರ ಕೈಯಲ್ಲಿ ಆಡಳಿತ
ಹೈ-ಕ ವಿಶೇಷ ಸ್ಥಾನಮಾನ ಜಾರಿಯಾದ ನಂತರ ರಾಜ್ಯಪಾಲರು ಅದರ ಮುಖ್ಯಸ್ಥರಾಗಿರುತ್ತಾರೆ. ಮುಖ್ಯಮಂತ್ರಿ ಜತೆ ಸಮಾಲೋಚಿಸಿ ಆ ಪ್ರದೇಶಕ್ಕೆ ಹಣ ಒದಗಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ. ವಿಶೇಷ ಕೈಗಾರಿಕಾ ಬಂಡವಾಳ ನೀತಿ ಮತ್ತು ಮೌಲಸೌಕರ್ಯ ನೀತಿ ಹಾಗೂ ಆ ಪ್ರದೇಶಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ನೀಡಬಹುದಾದ ವಿಶೇಷ ಸಹಾಯಧನ ನೀತಿಯನ್ನು ಸರ್ಕಾರ ಪ್ರಕಟಿಸಲಿದೆ.












Click it and Unblock the Notifications