48 ಕ್ರಿಮಿನಲ್ ಕೇಸು ಹೊತ್ತಿದ್ದ ಭಯ್ಯಾಗೆ ಕ್ಲೀನ್ ಚಿಟ್

ಡಿಎಸ್ಪಿ ಹತ್ಯೆ ಪ್ರಕರಣದ ಸಂಬಂಧ ಸಿಬಿಐ ಪೂರಕ ಆರೋಪ ಪಟ್ಟಿಯನ್ನು ಇಂದು ಸಲ್ಲಿಸಿದ್ದು, ಇದರಲ್ಲಿ ರಾಜಾ ಭಯ್ಯಾ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಡಿಎಸ್ಪಿ ಝಿಯಾ-ಉಲ್-ಹಕ್ ಹತ್ಯೆಯ ಹಿಂದೆ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜಾ ಭಯ್ಯಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಡಿಎಸ್ಪಿ ಹತ್ಯೆಗೆ ರಾಜಾ ಭಯ್ಯಾ ಅವರೇ ಕಾರಣ ಎಂದು ಆರೋಪಿಸಿ ಅಧಿಕಾರಿಯ ಪತ್ನಿ ಪರ್ವೀನ್ ಪೊಲೀಸರಿಗೆ ದೂರು ನೀಡಿದ್ದರು. ನನಗೆ ನ್ಯಾಯ ದೊರೆಯದಿದ್ದರೆ ಸಿಎಂ ಅಖಿಲೇಶ್ ನಿವಾಸದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪರ್ವೀನ್ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಾಪ್ ಗಡದಲ್ಲಿ ಇಬ್ಬರ ಹತ್ಯೆ ನಡೆದಿತ್ತು. ವಿಷಯ ತಿಳಿದೊಡನೆ ಡಿಎಸ್ಪಿ ಹಕ್ ಅವರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಗುಂಪೊಂದು ಡಿಎಸ್ಪಿ ಮೇಲೆ ಹಲ್ಲೆ ನಡೆಸಿ, ನಂತರ ಅವರನ್ನು ಗುಂಡಿಕ್ಕಿ ಹತ್ಯೆಗೈದಿತ್ತು. ಹತ್ಯೆಯು ರಾಜಾ ಭಯ್ಯಾ ಸಚಿವರಿಂದಲೇ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಗೂಂಡಾ ರಾಜ್ಯದ ದೊಣ್ಣೆನಾಯಕ: ಸಿನಿಮಾಗಳಲ್ಲಿ ಕಂಡು ಬರುವಂತೆ ಶಸ್ತ್ರಧಾರಿ ಗನ್ ಮ್ಯಾನ್ ಗಳ ಜೊತೆ ಠಾಕೂರ್ ನಂತೆ ಮಿಂಚುತ್ತಿದ್ದ ರಾಜಾ ಭಯ್ಯಾ ಅಲಿಯಾಸ್ ಕುವರ್ ರಘುರಾಜ್ ಪ್ರತಾಪ್ ಸಿಂಗ್ ಮಾಮೂಲಿ ವ್ಯಕ್ತಿಯಲ್ಲ. ಐದು ಬಾರಿ ಕುಂದ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಗೆದ್ದಸಾಧನೆ ಬೆನ್ನ ಹಿಂದೆ ಹೊತ್ತಿದ್ದಾರೆ. ಜೊತೆಗೆ ಸುಮಾರು 48 ಕ್ರಿಮಿನಲ್ ಕೇಸು ಗಳನ್ನು ಕೂಡಾ.
ಮಾಯಾವತಿ ಅಧಿಕಾರದಲ್ಲಿದ್ದ ಕಾಲದಲ್ಲಿ ರಾಜಾಭಯ್ಯ 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಕೊಲೆ ಯತ್ನ, ಡಕಾಯಿತಿ, ಕಿಡ್ನಾಪ್ ಸೇರಿದಂತೆ 48 ಕೇಸುಗಳನ್ನು ಮೈಮೇಲೆ ಹಾಕಿಕೊಂಡಿದ್ದರೂ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅಖಿಲೇಶ್ ಯಾದವ್ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆದರು. ಆಹಾರ ಮತ್ತು ನಾಗರಿಕ ಪೂರೈಕೆ ಜೊತೆಗೆ ಬಂದಿಖಾನೆ ಸಚಿವರಾದರು. ನವೆಂಬರ್ 2002ರಲ್ಲಿ ಮಾಯಾವತಿ ಸರ್ಕಾರ 'ಪೋಟಾ' (Prevention of Terrorism Act ) ಕಾಯ್ದೆಯಡಿಯಲ್ಲಿ ಆರೋಪಗಳ ಪಟ್ಟಿ ದಾಖಲಿಸಿದ್ದರು.
2003ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾದ ಅರ್ಧಗಂಟೆಯಲ್ಲೇ ರಾಜಾ ಭಯ್ಯಾ ಅವರ ಮೇಲಿನ ಎಲ್ಲಾ ಆರೋಪಗಳನ್ನು ಕೈ ಬಿಟ್ಟಿದ್ದರು. ಆದರೆ, ಇದೇ ಮುಂದೆ ಪೋಟಾ ಕೇಸ್ ಪೊಲೀಸ್ ಅಧಿಕಾರಿಯ ಹತ್ಯೆಗೆ ಕಾರಣವಾಯಿತು. ರಾಜಾಭಯ್ಯಾ ವಿರುದ್ಧ ತನಿಖೆ ನಡೆಸುತ್ತಿದ್ದ ಡಿವೈಎಸ್ ಪಿ ರಾಮ್ ಶಿರೋಮಣಿ ಪಾಂಡೆ 2007ರಲ್ಲಿ ರಸ್ತೆ ಅಪಘಾತದಲ್ಲಿ ಅಸುನೀಗಿದರು.
ಅಲಹಾಬಾದ್ ಕೋರ್ಟಿನಲ್ಲಿ ರಾಜಾಭಯ್ಯ ವಿರುದ್ಧ ಚಾರ್ಛ್ ಶೀಟ್ ಸಲ್ಲಿಸಲು ಹೋಗುತ್ತಿದ್ದ ಪಾಂಡೆ ಅಪಘಾತದಲ್ಲಿ ಸತ್ತಿದ್ದು ಎಂದರೆ ಯಾರೂ ನಂಬುವುದಿಲ್ಲ.
ಪ್ರಭಾವಿ ರಾಜಕಾರಣಿ : ಇಷ್ಟಾಗಿ ಡಕಾಯಿತಿ ದೊರೆಯೊಬ್ಬನ ಪ್ರೊಫೈಲ್ ಹೋಲುವ ರಾಜಾಭಯ್ಯಾ ಪ್ರಭಾವಿ ರಾಜಕಾರಣಿ ಮಾತ್ರವಲ್ಲ ಕಾನೂನು ಪದವೀಧರ ಎಂಬುದು ವಿಶೇಷ. ಕ್ರಿಮಿನಲ್ ಕೃತ್ಯದಿಂದ ಹೇಗೆ ಹೊರಬರಬೇಕು ಎಂಬುದನ್ನು ಕೂಡಾ ಕಲಿತವರು.
ರಾಜಾಭಯ್ಯಾ ಅವರ ಅಜ್ಜ ರಾಜಾ ಬಜರಂಗ್ ಬಹೂದ್ದರ್ ಸಿಂಗ್ ಅವರು ಪಂತ್ ನಗರ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ನಂತರ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ಆದರೆ, ರಾಜಾ ಬರೀ ಕಿಂಗ್ ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಕಿಂಗ್ ಮೇಕರ್ ಆಗಿ ಮೆರೆದವರು. ಸುಮಾರು 5 ಅಸೆಂಬ್ಲಿ ಕ್ಷೇತ್ರ ಹಾಗೂ ಅಷ್ಟೇ ಲೋಕಸಭಾ ಕ್ಷೇತ್ರಗಳ ಮೇಲೆ ರಾಜಾಭಯ್ಯಾ ಸಂಪೂರ್ಣ ಹಿಡಿತ ಹೊಂದಿದ್ದಾರೆ.












Click it and Unblock the Notifications