ರಂಜಾನ್: ದುಬೈಗೆ ತೆರಳಿ ಭಿಕ್ಷೆ ಬೇಡುವ ಭಾರತೀಯರು

ಹೀಗೆ ಭಿಕ್ಷಾಟನೆಯಲ್ಲಿ ತೊಡಗುವ ಮಂದಿ ಕೆಲವರು ನಿಜವಾಗಿಯೂ ನಿರ್ಗತಿಕರೇ ಇರಬಹುದು. ಆದರೆ ಅನೇಕರು ದೊಡ್ಡ ಮಾಫಿಯಾ ಸೃಷ್ಟಿಸಿಕೊಂಡು ಭಿಕ್ಷಾಟನೆ ಮಾಡುವುದನ್ನು ಲಾಭದಾಯಕ ಉದ್ಯಮವಾಗಿಸಿಕೊಂಡಿದ್ದಾರೆ.
ಹೆಚ್ಚಾಗಿ ದಕ್ಷಿಣ ಭಾರತದಿಂದ ಅನೇಕ ಮಂದಿ ರಂಜಾನ್ ಸಮಯದಲ್ಲಿ ಭಿಕ್ಷಾಟನೆಗೆಂದೇ ವಿಮಾನವೇರಿ ಕೊಲ್ಲಿ ರಾಷ್ಟ್ರಗಳನ್ನು ತಲುಪಿಕೊಳ್ಳುತ್ತಿದ್ದಾರೆ. ಹಾಗಂತ ಇದು ಇದೇ ಮೊದಲ ಬಾರಿಗೆ ಕಂಡುಬಂದ ವಿದ್ಯಮಾನವಲ್ಲ. ಅನೇಕ ವರ್ಷಗಳಿಂದ ಈ ಕೆಟ್ಟ ಚಾಳಿ ನಡೆದುಬಂದಿದೆ.
ಗಮನಾರ್ಹ ಸಂಗತಿಯೆಂದರೆ ಕೊಲ್ಲಿ ರಾಷ್ಟ್ರಗಳಲ್ಲಿ ಭಿಕ್ಷೆ ಎತ್ತುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ. ಆದರೂ ರಂಜಾನ್ ಹಬ್ಬದ ವೇಳೆ ಮುಸ್ಲಿಮರು ದಯಾಳುಗಳಾಗಿ ದೊಡ್ಡ ಮೊತ್ತಗಳಲ್ಲಿ ಭಿಕ್ಷೆ ಹಾಕುತ್ತಾರೆ ಎಂಬ ಆಸೆಯಿಂದ ವಿಮಾನವೇರಿ ಹೋಗುತ್ತಾರೆ. ಅದರಿಂದ ಲಕ್ಷಾಂತರ ರೂ ಇವರ ಗಂಟು ಸೇರುತ್ತದೆ. ಇಂತಹವುರುಗಳ ಆಸೆಗೆ ತಣ್ಣೀರು ಎರಚದೆ ಅಲ್ಲಿನ ಮುಸ್ಲಿಮರು ಸಹ ಬೇಕಾದಷ್ಟು ಭಿಕ್ಷೆ (Zakat) ಹಾಕುತ್ತಾರೆ.
ಭಾರತ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳಿಂದ ಜನ ಹೀಗೆ ಭಿಕ್ಷಾಟನೆಗೆಂದೇ ವಿಮಾನವೇರುತ್ತಾರೆ. ಒಬ್ಬೊಬ್ಬರೂ ಒಂದೊಂದು ಪಕ್ಷ ನೀಡಿ, ವೀಸಾ, ಪಾಸ್ ಪೋರ್ಟ್, ಟಿಕೆಟ್ ಮತ್ತಿತರ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಇದಕ್ಕಾಗಿ ಏಜೆಂಟುಗಳ ದೊಡ್ಡ ಗ್ಯಾಂಗುಗಳೇ ಕಾರ್ಯ ನಿರ್ವಹಿಸುತ್ತವೆ. ಏಜೆಂಟುಗಳು ಇಂತಹ ಜನರನ್ನೇ ಗುರುತಿಸಿ, ಕೊಲ್ಲಿ ರಾಷ್ಟ್ರಗಳಿಗೆ ಬಿಟ್ಟು ಬರುತ್ತಾರೆ.
ಭಾರತದ ರೂಪಾಯಿಗಿಂತ ಕೊಲ್ಲಿ ರಾಷ್ಟ್ರಗಳ ಕರೆನ್ಸಿ ಮೌಲ್ಯ ಹೆಚ್ಚಾಗಿರುವುದರಿಂದ ಏಜೆಂಟುಗಳು ಮತ್ತು 'ದಿಡೀರ್ ಭಿಕ್ಷುಕರಿಗೆ' ರಂಜಾನ್ ವೇಳೆ ಭಿಕ್ಷಾಟನೆ ಲಾಭದಾಯಕವಾಗಿದೆ. ರಂಜಾನ್ ಋತು ಮುಗಿಯುವ ವೇಳೆಗೆ ಒಬ್ಬೊಬ್ಬ ಭಿಕ್ಷಕನೂ ಲಕ್ಷಾಧಿಪತಿಯಾಗಿರುತ್ತಾನೆ. ಕನಿಷ್ಠ ತಲಾ ಐದಾರು ಲಕ್ಷ ರೂ ಅವರ ಕೈಸೇರಿರುತ್ತದೆ.












Click it and Unblock the Notifications