ಕೃಷ್ಣಾನದಿಯ ಕಪಿಮುಷ್ಟಿಯಲ್ಲಿ ಬೆಳಗಾವಿ, ರಾಯಚೂರು

ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ ಮನೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಮೀನು ಹಿಡಿಯಲು ಹೋದ ಸುಧೀರ್ ಎಂಬ ವ್ಯಕ್ತಿ ನೇತ್ರಾವತಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕಾವೇರಿ, ಕೃಷ್ಣಾ, ತುಂಗಭದ್ರಾ, ವರದಾ, ನೇತ್ರಾವತಿ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ರಾಜಾಪುರ ಬ್ಯಾರೇಜ್‌ನಿಂದ 1.89 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಕೃಷ್ಣಾ ನದಿಯಲ್ಲಿ 2.24 ಲಕ್ಷ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಕೃಷ್ಣಾ, ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 18 ಸೇತುವೆಗಳು ಜಲಾವೃತಗೊಂಡಿದ್ದು, 20ಕ್ಕೂ ಹೆಚ್ಚು ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ.
ನೆರೆಯ ಪರಿಣಾಮ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 2.23 ಲಕ್ಷ, ಆಲಮಟ್ಟಿ ಜಲಾಶಯದಿಂದ 2.54 ಲಕ್ಷ ಕ್ಯೂಸೆಕ್‌ಗಳಷ್ಟು ನೀರನ್ನು ಹೊರಬಿಡಲಾಗುತ್ತಿದೆ.
ಭರ್ತಿಯಾಗಿರುವ ತುಂಗಭದ್ರಾ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಹಂಪಿಯ ಕೆಲ ಸ್ಮಾರಕ, ಕಂಪ್ಲಿ-ಗಂಗಾವತಿ ಸೇತುವೆ ಸೇರಿದಂತೆ, ನದಿಪಾತ್ರದ ಗ್ರಾಮಗಳ ಕೆಲ ಪ್ರದೇಶಗಳು ಮುಳುಗಡೆಯಾಗಿವೆ.
ಬೆಂಗಳೂರು, ಮಂಗಳೂರು, ಶಿರಸಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮವಾದ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಒಳಹರಿವು ಹೆಚ್ಚಿದ್ದು, ಜಲಾಶಯದ ನೀರಿನ ಮಟ್ಟ 1810.10 ಅಡಿಗೆ ಏರಿದೆ. ಜಲಾಶಯ ಭರ್ತಿಯಾಗಲು 9 ಅಡಿ ಬಾಕಿಯಿದೆ.
ಕೆಆರ್ಎಸ್ ಭರ್ತಿ : ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಶ್ರೀರಂಗಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬ ದೇವಾಲಯಕ್ಕೆ ನೀರು ನುಗ್ಗುತ್ತಿದೆ.
ಎಲ್ಲಿ ಎಷ್ಟು ಮಳೆ : ಆಗುಂಬೆಯಲ್ಲಿ 12, ಉತ್ತರ ಕನ್ನಡದಲ್ಲಿ 17, ಗೇರುಸೊಪ್ಪದಲ್ಲಿ 16 ಮತ್ತು ಗೋಕರ್ಣದಲ್ಲಿ 13 ಸೆಂ.ಮೀ ಮಳೆ ಸುರಿದಿದೆ. ಮಂಗಳೂರು ಮತ್ತು ಕೊಲ್ಲೂರಿನಲ್ಲಿ 12, ಬೆಳ್ತಂಗಡಿ, ಹೊನ್ನಾವರದಲ್ಲಿ 10 ಸೆಂಮೀ ಮಳೆ ಬಂದಿದೆ.
ಮಹಾರಾಷ್ಟ್ರ ಮಳೆ ಕಾರಣ : ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ವಾಡಿಕೆಯಂತೆ ವಾರ್ಷಿಕ 219.8 ಮಿ.ಮೀ ಮಳೆ ಬೀಳುತ್ತಿತ್ತು. ಈ ಬಾರಿ ಶೇ14 ನಷ್ಟು ಮಳೆ ಹೆಚ್ಚಾಗಿದೆ. ಪ್ರವಾಹ ಪರಿಸ್ಥಿತಿಗೆ ಮಹಾರಾಷ್ಟ್ರಲ್ಲಿ ಸುರಿಯುತ್ತಿರುವ ಮಳೆ ಕಾರಣ ಎಂದು ಹವಾಮಾನ ಇಲಾಖೆ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಮಹಾರಾಷ್ಟದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಮುನ್ಸೂಚನೆ ಏನು : ಮುಂದಿನ 48 ಗಂಟೆಗಳಲ್ಲಿ ಕರಾವಳಿ ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications