ಸೋದರಿಯರಿಗೆ ಸಿಕ್ತು 20 ಸಾವಿರ ಕೋಟಿ ಪಿತ್ರಾರ್ಜಿತ ಆಸ್ತಿ
ನವದೆಹಲಿ, ಜು.28: ಮಹಾರಾಜರೊಬ್ಬರ ಹೆಣ್ಣು ಮಕ್ಕಳಿಬ್ಬರ ಎರಡು ದಶಕಗಳ ಕನಸು ಈಡೇರಿದೆ. ಫರಿದಾಕೋಟ್ ನ ಹರಿಂದರ್ ಸಿಂಗ್ ಬ್ರಾರ್ ಅವರ ಆಸ್ತಿ ಹಂಚಿಕೆ ಉಯಿಲು ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಸೋದರಿಯರಿಬ್ಬರಿಗೆ 20 ಸಾವಿರ ಕೋಟಿ ಲಭಿಸಲಿದೆ.
ಸುಮಾರು 32 ವರ್ಷ ಹಳೆಯದಾದ ಉಯಿಲು ಪತ್ರ ನಕಲು ಹಾಗೂ ಕಾನೂನಿನ ನಿಯಮಗಳನ್ನು ಮುರಿದಿದೆ. ಹೀಗಾಗಿ ಫರಿದಾಕೋಟ್ ಕೋಟೆ ಸೇರಿದಂತೆ 20,000 ಕೋಟಿ (4.4 ಬಿಲಿಯನ್ ಡಾಲರ್) ರು ಮೌಲ್ಯದ ಹರಿಂದರ್ ಸಿಂಗ್ ಬ್ರಾರ್ ಅವರ ಸ್ಥಿರಾಸ್ತಿ ಅವರ ಪುತ್ರಿಯರ ಪಾಲಾಗಿದೆ.
ಮಹಾರಾಜ ಅವರ ಆಸ್ತಿಯಲ್ಲಿ ಫರಿದಾಬಾದ್ ನವದೆಹಲಿಯ ಕೊಪರ್ ನಿಕಸ್ ಮಾರ್ಗ್ ನಲ್ಲಿರುವ ಫಾರಿದಾಕೋಟ್ ಹೌಸ್, ಚಂದೀಗಢದಲ್ಲಿರ್ವುಅ ಮಣಿ ಮಜ್ರಾ ಕೋಟೆ, ರಾಲ್ಸ್ ರಾಯ್ಸ್ ಸೇರಿದಂತೆ ಅನೇಕ ವಿಂಟೇಜ್ ಕಾರುಗಳು, 200 ಎಕರೆ ಪ್ರದೇಶದ ಏರೋಡ್ರಾಮ್, ಹೈದರಾಬಾದ್, ದೆಹಲಿಯಲ್ಲಿರುವ ಇನ್ನಷ್ಟು ಸ್ಥಿರಾಸ್ತಿಗಳು, 1000 ಕೋಟಿ ರು ಬೆಲೆ ಬಾಳುವ ಚಿನ್ನಾಭರಣಗಳು, ಮುಂಬೈನ ಚಾರ್ಟೆಡ್ ಬ್ಯಾಂಕ್ ನ ಖಾತೆಯಲ್ಲಿರುವ ಮೊತ್ತ ಎಲ್ಲವೂ ಸೇರಿದೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ತಜ್ಞರು ಹಾಗೂ ಅಕೌಂಟೆಟ್ ಗಳ ಅಂದಾಜಿನ ಪ್ರಕಾರ ಆಸ್ತಿ ಹಾಗೂ ಕಟ್ಟಡಗಳ ಮೌಲ್ಯ 20,000 ಕೋಟಿ ರು ದಾಟುತ್ತದೆ. ಮಣಿ ಮಜ್ರಾ ಕೋಟೆ ಸುಮಾರು 350 ವರ್ಷ ಹಳೆಯದಾಗಿದ್ದು, ಉತ್ತಮ ಸ್ಥಿತಿಯಲ್ಲಿಲ್ಲ ಎಂದು ತಿಳಿದು ಬಂದಿದೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಮಹಾರಾಜರ ಬಳಿಯೆ ಎಲ್ಲಾ ಆಸ್ತಿ ಭದ್ರವಾಗಿತ್ತು. ಆದರೆ, 1992ರಲ್ಲಿ ಆಸ್ತಿಗಾಗಿ ತಕರಾರು ಆರಂಭವಾಯಿತು. ಮಾಜಿ ಮಹಾರಾಜರ ಪುತ್ರಿ ಅಮೃತ್ ಕೌರ್ ಅವರು ಚಂಡೀಗಢ ಕೋರ್ಟಿನಲ್ಲಿ ದಾವೆ ಹೂಡಿದರು. ಸುಮಾರು 21 ವರ್ಷಗಳ ಕಾನೂನು ಸಮರದ ನಂತರ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಜನೀಶ್ ಕುಮಾರ್ ಅವರು 1981ರ ಮಹಾರಾಜರ ಉಯಿಲು ಪತ್ರ ನಕಲು ಹಾಗೂ ತಿದ್ದಲ್ಪಟ್ಟಿದೆ ಎಂದು ತೀರ್ಪು ನೀಡಿದ್ದಾರೆ.
ಈ ತೀರ್ಪಿನ ನಂತರ ಮಹಾರಾಜರ ಪುತ್ರಿ ಅಮೃತ್ ಕೌರ್ ಹಾಗೂ ಕೋಲ್ಕತ್ತಾ ಮೂಲದ ಸೋದರಿ ದೀಪಿಂದರ್ ಕೌರ್ ಅವರಿಗೆ ಸಮಸ್ತ ಆಸ್ತಿ ಸಲ್ಲಲಿದೆ. ಮೂರನೇ ತಂಗಿ ಮಹೀಪಿಂದರ್ ಕೌರ್ ಅವರು 2001ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಅವರಿಗೆ ಮದುವೆಯಾಗಿರಲಿಲ್ಲ.
ಮಹಾರಾಜ ಬ್ರಾರ್ ಅವರಿಗೆ ಈ ಮೂವರು ಪುತ್ರಿಯರಲ್ಲದೆ ಒಬ್ಬ ಮಗ ಇದ್ದರು. ಹರ್ಮೊಹಿಂದರ್ ಸಿಂಗ್ ಬ್ರಾರ್ ಅವರು 1981ರಲ್ಲಿ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಮೇಲೆ ಮಹಾರಾಜರಿಗೆ ಪುತ್ರಶೋಕ ಅವರಿಸಿತು.
ಈ ಸಮಯದ ದುರುಪಯೋಗ ಮಾಡಿಕೊಂಡು ಲಾಭವಾಗಿ ಪರಿವರ್ತನೆ ಮಾಡಿಕೊಂಡ ಅರಮನೆ ಅಧಿಕಾರಿಗಳು ಹಾಗೂ ಸೇವಕರು ನಕಲಿ ಉಯಿಲು, ಅಸ್ತಿ ಕ್ರಯ ಪತ್ರ ತಯಾರಿಸಿದ್ದಾರೆ ಎಂದು ಅಮೃತ್ ಕೌರ್ ದೂರು ಸಲ್ಲಿಸಿದ್ದರು. ನಕಲು ಉಯಿಲಿನ ಪ್ರಕಾರ 1982ರಲ್ಲಿ ಸ್ಥಾಪನೆಗೊಂದ ಮೆಹರ್ವಾಲ್ ಖೆವಾಜಿ ಟ್ರಸ್ಟಿಗೆ ಸಮಸ್ತ ಆಸ್ತಿ ಸೇರುವಂತೆ ಮಾಡಲಾಗಿತ್ತು.
1989ರಲ್ಲಿ ಮಹಾರಾಜರ ದೇಹಾಂತ್ಯವಾದ ಮೇಲೆ ಆಸ್ತಿ ಮೇಲೆ ಟ್ರಸ್ಟ್ ತನ್ನ ಅಧಿಕಾರ ಸ್ಥಾಪಿಸಿತು. ಟ್ರಸ್ಟ್ ನಲ್ಲಿ ಮಹಾರಾಜರ ಸೇವಕರಲ್ಲದೆ ಮಕ್ಕಳನ್ನು ಚೇರ್ಮನ್ ಹಾಗೂ ಉಪಾಧ್ಯಕ್ಷರನ್ನಾಗಿಸಲಾಗಿತ್ತು. ತಿಂಗಳಿಗೆ 1,200 ಹಾಗೂ 1,000 ರು ಸಿಗುವಂತೆ ಮಾಡಲಾಗಿತ್ತು.
ನಮ್ಮ ಅಪ್ಪ ಇದ್ದ ಸ್ಥಿತಿಯಲ್ಲಿ ಉಯಿಲು ಪತ್ರಕ್ಕೆ ಸಹಿ ಹಾಕಲು ಸಾಧ್ಯವಿರಲಿಲ್ಲ. ಹೀಗಾಗಿ ಇದು ನಕಲಿ ಉಯಿಲು ಪತ್ರ. ನಮ್ಮ ಜೊತೆ ಅವರು ಎಂದಿಗೂ ಉಯಿಲು, ಆಸ್ತಿ ಹಂಚಿಕೆ ಬಗ್ಗೆ ಚರ್ಚಿಸಿರಲಿಲ್ಲ. ಮುಖ್ಯವಾಗಿ ನಮ್ಮ ತಾಯಿ, ಮಹಾರಾಜರ ಪತ್ನಿ ನರೀಂದರ್ ಕೌರ್, ಮಹಾರಾಜರ ತಾಯಿ ಮೊಹಿಂದರ್ ಕೌರ್ ಅವರ ಪ್ರಸ್ತಾಪಿಸದೆ ಉಯಿಲು ತಯಾರಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಮೃತ್ ಕೌರ್ ವಾದಿಸಿದ್ದರು.
ಆದರೆ, ಕಾನೂನು ಇಲ್ಲಿಗೆ ನಿಂತಿಲ್ಲ. ಟ್ರಸ್ಟಿಗಳು ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟಿಗೆ ಮೊರೆ ಹೋಗುವ ಸುದ್ದಿಯಿದೆ.
ಐಎಎನ್ಎಸ್












Click it and Unblock the Notifications