ಬೆಳೆಯುತ್ತಿರುವ ಬೆಂಗಳೂರಿಗೆ ಸಿಎಂ ಕಡಿವಾಣ!

ಬೆಂಗಳೂರಿನ ಭೂ ಸಂರಕ್ಷಣೆಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬ ಪ್ರಶ್ನೆಗೆ ಸದನಸಲ್ಲಿ ಉತ್ತರಿಸಿರುವ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಇನ್ನು ಮುಂದೆ ಭೂ ಪರಿವರ್ತನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಭೂ ಪರಿವರ್ತನೆಗೆ ಕಡಿವಾಣ ಹಾಕಲು, ಶೀಘ್ರದಲ್ಲೇ ಬಿಎಂಆರ್ ಡಿಎ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಳೆಯುತ್ತಿರುವ ಬೆಂಗಳೂರಿಗೆ ಕಡಿವಾಣ ಹಾಕಲು ಸಿಡಿಪಿ ಕರಡು ಪ್ರತಿಯನ್ನು ಈಗಾಗಲೇ ರಚಿಸಲಾಗಿದೆ.ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಲಿಸಿದ ಬಳಿಕ 15 ದಿನಗಳಲ್ಲಿ ಈ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಿಎಂ ಹೇಳಿದರು.
ಬಿಎಂಆರ್ ಡಿಎ ವ್ಯಾಪ್ತಿಗೆ ಒಟ್ಟು 8,006 ಚದರ ಮೀಟರ್ ಒಳಪಡುತ್ತದೆ. ಈ ವ್ಯಾಪ್ತಿಗೆ ಬರುವ ಏಳು ಯೋಜನಾ ಪ್ರಾಧಿಕಾರಗಳಲ್ಲಿ ಒಟ್ಟು 1,697 ಲೇಔಟ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ವಸತಿ ಸಮುಚ್ಛಯಕ್ಕೆ ಅನುಮತಿ ಇಲ್ಲ : ನೀರಿನ ಲಭ್ಯತೆ ಇರದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲು ಅನುಮತಿ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ನೀರಿನ ಲಭ್ಯತೆ ತೋರಿಸಬೇಕು : ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ಜನರಿಗೆ ನೀರು ಒದಗಿಸುವುದು ದೊಡ್ಡ ಸವಾಲಾಗಿದೆ. ಆದ್ದರಿಂದ, ಇನ್ನು ಮುಂದೆ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುನ್ನವೇ ಕುಡಿಯುವ ನೀರು ಪೂರೈಸಲು ಬಿಲ್ಡರ್ ಗಳು ಮಾಡಿಕೊಂಡಿರುವ ವ್ಯವಸ್ಥೆಯ ಮಾಹಿತಿ ನೀಡಬೇಕು.
ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್ ಮೆಂಟ್ ನಿರ್ಮಾಣವಾಗುವ ಸ್ಥಳದ ಅಂತರ್ಜಲ ಮಟ್ಟದ ಬಗ್ಗೆಯೂ ಪರಿಶೀಲನೆ ನಡೆಸಿ, ನಿರಾಕ್ಷೇಪಣಾ ಪತ್ರ ನೀಡಲಿದ್ದಾರೆ. ನಂತರ ಬಿಲ್ಡರ್ ಗಳು ಅಪಾರ್ಟ್ ಮೆಂಟ್ ನಿರ್ಮಿಸಬಹುದು ಎಂದು ಸಿಎಂ ತಿಳಿಸಿದರು.












Click it and Unblock the Notifications