ಬಜೆಟ್ ಅಧಿವೇಶನ : ಮಂಗಳವಾರದ ಸುದ್ದಿಗಳು

ಮೂಡಾ ಅವ್ಯವಹಾರ ಸಿಐಡಿ ತನಿಖೆಗೆ : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ಅವ್ಯವಹಾರದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಮುಖ್ಯಂಮತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಾ ಆಯುಕ್ತ ಡಾ.ಶಿವರಾಂ, ಕಾಂಗ್ರೆಸ್ ಮುಖಂಡ ಕಬ್ಬಳ್ಳಿ ಆನಂದ್, ಹಾಗೂ ಸ್ಥಳೀಯರಾದ ನಾಗಲಿಂಗಸ್ವಾಮಿಯನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಲಾಗುವುದು ಎಂದು ಸಿದ್ದರಾಮಯ್ಯ ಸದನಕ್ಕೆ ವಿವರಣೆ ನೀಡಿದರು.
ಎಲ್ಲರಿಗೂ ಆಧಾರ್ ಕಾರ್ಡ್ : 2014ರ ಜೂನ್ ವೇಳೆಗೆ ರಾಜ್ಯದ ಎಲ್ಲರಿಗೂ ಆಧಾರ್ ಕಾರ್ಡ್ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಚೆಲುವರಾಯ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಈಗಾಗಲೇ 2 ಕೋಟಿ 41 ಲಕ್ಷ ಜನರಿಗೆ ಆಧಾರ್ ಕಾರ್ಡ್ ವಿತರಿಸಲಾಗಿದೆ ಎಂದರು.
ಪ್ರತಿ ಹೋಬಳಿ ಕೇಂದ್ರದಲ್ಲಿ ಒಂದು ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. 2014ರ ಜೂನ್ ವೇಳೆಗೆ ರಾಜ್ಯದ ಎಲ್ಲರಿಗೂ ಆಧಾರ್ ಕಾರ್ಡ್ ನೀಡಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸದ್ಯ ನೇಮಕಾತಿ ಇಲ್ಲ : ಹೈದರಾಬಾದ್ ಕರ್ನಾಟಕಕ್ಕೆ ದೊರಕಿರುವ ವಿಶೇಷ ಸ್ಥಾನಮಾನದ ಮೀಸಲಾತಿ ನಿಗದಿಯಾವುವ ತನಕ ರಾಜ್ಯದಲ್ಲಿ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೀದರ್ ಪಶುವೈದ್ಯಕೀಯ ಕಾಲೇಜು ಸೇರಿಂದತೆ ಸರ್ಕಾರ ವಿವಿಧ ನೇಮಕಾತಿಗಳನ್ನು ತಕ್ಷಣ ಸ್ಥಗಿತಗೊಳಿಸುವುದಾಗಿ ಹೇಳಿದರು.












Click it and Unblock the Notifications