ಲಾಠಿ ಮುರಿಯುವಂತೆ ಮನಸ್ವೇಚ್ಛೆ ಥಳಿಸಿದ್ದ ಎಸ್ಸೈ ಮನೆಗೆ

ಕುಡುಕನಿಗೆ ಪಾಠ ಕಲಿಸುವ ಭರದಲ್ಲಿ ಪೈಶಾಚಿಕತೆ ಮೆರೆದಿದ್ದ ರಾಯಚೂರಿನ ಮಾರ್ಕೆಟ್ ಯಾರ್ಡಿನ ಮಹಿಳಾ ಪೊಲೀಸ್ ಅಧಿಕಾರಿ ಬೇಬಿ ವಾಲೇಕರ್ ಅವರನ್ನು ಕರ್ತವ್ಯ ಲೋಪವೆಸಗಿದ ಕಾರಣ ಶನಿವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬಿ ಬಿಸ್ನಳ್ಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೇಬಿ ವಾಲೇಕರ್ ಯಃಕಶ್ಚಿತ್ ಒಬ್ಬ ಕುಡುಕನ ಮೇಲೆ ಖಾಕಿ ಪವರ್ ತೋರಿಸಿದ್ದರು. ಅದೂ ಯಾವ ಪರಿ ಅಂದರೆ ಅವರ ಕೈಯಲ್ಲಿದ್ದ ಲಾಠಿಯೇ ಮುರಿದುಹೋಗಿತ್ತು.
ನಗರದ ಪರಿಮಳ ಬಾರಿನಲ್ಲಿ ವ್ಯಕ್ತಿಯೊಬ್ಬ ಕುಡಿದು ರಂಪಾಟ ಮಾಡಿದ್ದ. ಅದು ವಾಲೇಕರ್ ಕಿವಿಗೆ ಬಿದ್ದಿದ್ದೇ ತಡ ಅವನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಅವನು ಠಾಣೆಯೊಳಕ್ಕೆ ಹೆಜ್ಜೆಯಿಟ್ಟಿದ್ದೇ ತಡ ಚಾಮುಂಡಿ ಅವತಾರ ತಾಳಿದ ಸದರಿ ಮಹಿಳಾ ಸಬ್ ಇನ್ಸ್ ಪೆಕ್ಟರ್, ರೋಶಾವೇಶದಿಂದ ಅವನ ಕಡೆಗೆ ಕೆಂಗಣ್ಣು ಬೀರಿದ್ದಾರೆ.
ಪೇದೆಗಳಿಗೆ ಹೇಳಿ ಕುಡುಕನ ಕೈಗಳನ್ನು ಆಕಡೆ ಈಕಡೆ ಎಳೆದಿಟ್ಟುಕೊಂಡು ಗೋಡೆಗೆ ಅವನ ಮುಖ ಮಾಡಿಸಿದ್ದಾರೆ. ಬಳಿಕ ಪೊಸಿಷನ್ ಗೆ ಬಂದ ಮೇಡಂ ವಾಲೇಕರ್, ಒಂದೇ ಸಮನೆ ಅವನ ಅಂಡಿನ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ನಿಲ್ಲಿಸುವ ಮಾತೇ ಇಲ್ಲ ಎಂಬಂತೆ ಅವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆದರೆ ಇದನ್ನೆಲ್ಲ ಯಾರೋ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಟಿವಿ ಚಾನೆಲುಗಳಿಗೆ ರವಾನಿಸಿದ್ದಾರೆ. ಮೇಡಂ ವಾಲೇಕರ್ ಅವರ ರೌದ್ರಾವತಾರ ಟಿವಿಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮೇಲಧಿಕಾರಿಗಳಿಗೆ ಎಲ್ಲೋ, ಏನೋ ಎಡವಟ್ಟಾಗಿರುವುದು ಅರಿವಿಗೆ ಬಂದಿದೆ. ತಕ್ಷಣ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಇಲಾಖಾ ರಿಪೋರ್ಟ್ ಕೇಳಿದ್ದಾರೆ.
ಮೇಡಂ ವಾಲೇಕರ್ ಅವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕುಡುಕರಿಗೆ ನಾನು ತಕ್ಕ ಪಾಠ ಕಲಿಸಿದ್ದೇನೆ. ತಾವು ನನಗೆ ಶಹಬ್ಬಾಸ್ ಅನ್ನಬೇಕು ಎಂದು ಸಮಜಾಯಿಷಿ ನೀಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿ ಕೆಂಡವಾದ ಜಿಲ್ಲಾ ಎಸ್ಪಿ ಬಿಸ್ನಳ್ಳಿ ಅವರು
'ಅಲ್ಲಮ್ಮಾ ಯಃಕಶ್ಚಿತ್ ಒಬ್ಬ ಕುಡುಕನ ಮೇಲೆ ನಿನ್ನ ಪವರ್ ಎಲ್ಲಾ ವೇಸ್ಟ್ ಮಾಡಿಕೊಂಡರೆ ಹೇಗೆ? ಸಮಾಜದ ಸ್ವಾಸ್ಥ್ಯ ಕಾಪಾಡಲು ತಾವು ಮಾಡಬೇಕಾದ ಕೆಲಸಗಳು ಬೇರೆಯೇ ಇವೆ ಎಂಬುದನ್ನು ಅರಿತುಕೊಳ್ಳಬೇಕಿತ್ತು. ಸದ್ಯಕ್ಕೆ ಮನೆಗೆ ನಡೆಯಮ್ಮಾ' ಎಂದು ಸಸ್ಪೆಂಡ್ ಆರ್ಡರ್ ಕೊಟ್ಟು ಮೇಡಂ ವಾಲೇಕರ್ ಅವರನ್ನು ಮನೆಗೆ ಕಳಿಸಿದ್ದಾರೆ.












Click it and Unblock the Notifications