ಅಡ್ಡಗೋಡೆ ಮೇಲೆ ದೀಪವಿಟ್ಟ ಯಡಿಯೂರಪ್ಪ

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಪಕ್ಷಕ್ಕೆ ಮರಳುವಂತೆ ಯಾವ ನಾಯಕರು ನನಗೆ ಆಹ್ವಾನ ನೀಡಿಲ್ಲ. ಪಕ್ಷದಿಂದ ಕರೆ ಬಂದ ನಂತರ, ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಬಿಜೆಪಿ ಪ್ಷಕದಲ್ಲಿನ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಬಿಜೆಪಿಯಂತಹ ರಾಷ್ಟೀಯ ಪಕ್ಷದ ಯಾವ ನಾಯಕರು ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅನಂತ್ ಕುಮಾರ್ ಯಾಕೆ ಭೇಟಿ ಮಾಡಲಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ಭೇಟಿ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ ಅವರನ್ನು ನಾನು ಯಾಕೆ ಭೇಟಿ ಮಾಡಬೇಕು. ಅನಂತ್ ಕುಮಾರ್ ಭೇಟಿ ಮಾಡುವ ಯಾವ ಅಗತ್ಯವೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಯಡಿಯೂರಪ್ಪ ಬಿಜೆಪಿಗೆ ಮರಳಲು ಅನಂತ್ ಕುಮಾರ್ ಒಪ್ಪಿಗೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಶಕ್ತಿ ಕರ್ನಾಟಕದಲ್ಲಿ ಹೆಚ್ಚಾಗಲು ಬಿಎಸ್ವೈ ಪಕ್ಷಕ್ಕೆ ಮರಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದರು. ಆದರೆ, ಅನಂತ್ ಕುಮಾರ್ ಅವರನ್ನು ಭೇಟಿಯಾಗುವುದಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. (ಬಿಎಸ್ವೈ ಸೇರ್ಪಡೆಗೆ ಅನಂತ್ ಕುಮಾರ್ ಅಸ್ತು)
ಗುರುವಾರ ಸಭೆ : ಲೋಕಸಭೆ ಚುನಾವಣೆಯಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯ ಎಂದ ಯಡಿಯೂರಪ್ಪ, ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಗುರುವಾರ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.
ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದರೆ, ಕೆಜಪಿ ಪಕ್ಷದ ಕಥೆ ಏನು? ಎಂಬುದು ಪಕ್ಷದ ನಾಯಕರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಆದ್ದರಿಂದ ಗುರುವಾರ ನಡೆಯುವ ಕೆಜೆಪಿ ಪಕ್ಷದ ಸಭೆ ಮಹತ್ವದ್ದಾಗಿದೆ. ನಾಳಿನ ಸಭೆಯಲ್ಲಿ ಬಿಎಸ್ವೈ ಬಿಜೆಪಿಗೆ ಮರಳುವ ಕುರಿತು ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. (ಯಡಿಯೂರಪ್ಪ ಬಿಜೆಪಿಗೆ ಏಕೆ ಮರಳಬಾರದು)
ಆಗಸ್ಟ್ ತಿಂಗಳಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಾರೆ. ಅವರ ಸಮ್ಮುಖದಲ್ಲಿ ಬಿಎಸ್ವೈ ಬಿಜೆಪಿಗೆ ಮರಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಬಿಜೆಪಿ ಪಕ್ಷದಲ್ಲಿ ಎಲ್ಲವೂ ಗೊಂದಲ ಮಯವಾಗಿದ್ದು, ಯಾವ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ ಎಂದು ರಾಜನಾಥ್ ಸಿಂಗ್ ಸೂಚನೆ ನೀಡಿರುವುದರಿಂದ ನಾಯಕರು ತಣ್ಣಗಿದ್ದಾರೆ.












Click it and Unblock the Notifications