ಟೆಕ್ಕಿ ಪತ್ನಿ ಸನಾ ಬೇಸರದಿಂದ ಸಾವಿಗೆ ಶರಣು

ವಿಜಯನಗರದ ಗೋವಿಂದರಾಜನಗರ 2ನೇ ಮುಖ್ಯರಸ್ತೆ ನಿವಾಸಿ 20 ವರ್ಷ ವಯಸ್ಸಿನ ಸನಾ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಸಾಫ್ಟ್ ವೇರ್ ಇಂಜಿನಿಯರ್ ಜಮೀಲ್ ಅಹ್ಮದ್ ಅವರನ್ನು ಮದುವೆಯಾಗಿದ್ದರು. ರಂಜಾನ್ ಆಚರಣೆ ಇಚ್ಛೆ ವ್ಯಕ್ತಪಡಿಸಿದ್ದ ಪತ್ನಿ ಸನಾ ತನ್ನ ತವರು ಮನೆಗೆ ಹೋಗುವುದಾಗಿ ಕಳೆದ ವಾರದಿಂದ ಹೇಳಿದ್ದಾರೆ. ಅದರೆ, ಜಮೀಲ್ ಈ ಬಗ್ಗೆ ಕಿವಿಗೊಟ್ಟಿರಲಿಲ್ಲ. ಇದರಿಂದ ಸನಾ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.
ಬಿಜಾಪುರದ ಗಾಂಧಿ ಚೌಕದ ಅಬ್ದುಲ್ ರಜಾಕ್ ಎಂಬುವರ ಪುತ್ರಿಯಾದ ಸನಾರನ್ನು 3 ತಿಂಗಳ ಹಿಂದೆ ಜಮೀಲ್ ಮದುವೆಯಾಗಿದ್ದರು. ಬೆಂಗಳೂರಿನ ಜೆ.ಪಿ ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಜಮೀಲ್ ಕಳೆದ 15 ದಿನಗಳ ಹಿಂದೆಯಷ್ಟೇ ಸನಾರನ್ನು ಬೆಂಗಳೂರಿಗೆ ಕರೆ ತಂದಿದ್ದ.
ಗೋವಿಂದ ರಾಜನಗರದ ಬಾಡಿಗೆ ಮನೆಯಲ್ಲಿ ದಂಪತಿ ಸುಖ ಸಂಸಾರ ನಡೆಸಿದ್ದರು. ಇನ್ನೆರಡು ದಿನಗಳಲ್ಲಿ ರಂಜಾನ್ ಮಾಸ ಆರಂಭ (ಅಮೆರಿಕ ಸೇರಿದಂತೆ ಹಲವೆಡೆ ಈಗಾಗಲೇ ಆಚರಣೆ ಆರಂಭವಾಗಿದೆ)ವಾಗುವುದನ್ನು ತಿಳಿದುಕೊಂಡ ಸನಾ ತಾನು ತವರು ಮನೆಗೆ ಕಳುಹಿಸಿಕೊಡುವಂತೆ ಪತಿಯನ್ನು ಕೇಳಿದ್ದಾರೆ.
ಆದರೆ, ರಜೆ ಇಲ್ಲದ ಕಾರಣ ರಂಜಾನ್ ಮುಗಿದ ಮೇಲೆ ಹೋದರಾಯಿತು ಇಲ್ಲೇ ಉಪವಾಸ ಕೈಗೊಂಡರೆ ಆಗುವುದಿಲ್ಲವೇ ಎಂದು ಜಮೀಲ್ ವಾದಿಸಿದ್ದಾರೆ. ಜಮೀಲ್ ವರ್ತನೆಯಿಂದ ನೊಂದ ಸನಾ, ತವರಿಗೂ ಕರೆ ಮಾಡದೆ ಆತುರದ ನಿರ್ಧಾರ ಕೈಗೊಂಡು ತನ್ನ ಜೀವನ ಅಂತ್ಯಗಾಣಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಮನೆಯಲ್ಲಿ ಜಮೀಲ್ ಇಲ್ಲದ ವೇಳೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸನಾ ಆತ್ಮಹತ್ಯೆ ಮಾಡಿಕೊಂಡ ವೇಳೆ ಜಮೀಲ್ ಕಚೇರಿಯಲ್ಲಿದ್ದರು. ಸಂಜೆ ಮನೆಗೆ ಬಂದ ಮೇಲೆ ವಿಷಯ ಗೊತ್ತಾಗಿದೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವಿಜಯ ನಗರ ಪೊಲೀಸರು ಹೇಳಿದ್ದಾರೆ.
ಪತ್ನಿ ಸಾವಿನಿಂದ ಆಘಾತಕ್ಕೊಳಗಾಗಿರುವ ಜಮೀಲ್ ಗೆ ಮಂಕು ಬಡಿದಂತಾಗಿದೆ. ಸನಾ ಅವರ ಕುಟುಂಬ ವರ್ಗ ಬಿಜಾಪುರದಿಂದ ಆಗಮಿಸಿದ್ದು, ಮಗಳ ಸಾವಿಗೆ ದುಃಖಿಸಿದ್ದಾರೆ.












Click it and Unblock the Notifications