ಕನ್ನಡ ಕುವರಿ ಮುಡಿಗೆ 12 ಚಿನ್ನದ ಪದಕ!
ಮೈಸೂರು, ಜು.6 : ಸಾಧಿಸುವ ಛಲ ವಿದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ವನಿತಾ ಎಂಬ ವಿದ್ಯಾರ್ಥಿನಿ ಸಾಬೀತು ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ 93 ನೇ ಘಟಿಕೋತ್ಸವದಲ್ಲಿ ವನಿತಾ 12 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶುಕ್ರವಾರ ಮೈಸೂರು ವಿಶ್ವವಿದ್ಯಾಯಲದಲ್ಲಿ ನಡೆದ ಘಟಿಕೋತ್ಸವದಲ್ಲಿ, ವನಿತಾ ಎಚ್.ಆರ್. ಎಂಎಸ್ಸಿ ರಸಾಯನ ಶಾಸ್ತ್ರ ವಿಷಯದಲ್ಲಿ 12 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಆಶ್ಚರ್ಯವೆಂದರೆ, ವನಿತಾ ಓದಿರುವುದು ಕನ್ನಡ ಮಾಧ್ಯಮದಲ್ಲಿ.
ವನಿತಾ ಮೈಸೂರಿನ ಕೈಗಾರಿಕಾ ಪ್ರದೇಶವಾದ ಹೋಟಗಳ್ಳಿ ನಿವಾಸಿಗಳಾದ ಶಾರದಮ್ಮ ಮತ್ತು ಎಚ್.ಕೆ.ರಂಗಸ್ವಾಮಿ ದಂಪತಿಗಳ ಪುತ್ರಿ. ರಂಗಸ್ವಾಮಿ ಗೃಹ ಕೈಗಾರಿಕೆಗಳಿಂದ ತಯಾರಿಸುವ ವಸ್ತುಗಳ ಪ್ಯಾಕೇಜಿಂಗ್ ಮಾಡಲು ಬೇಕಾದ ಉತ್ಪನ್ನಗಳನ್ನು ತಯಾರಿಸುತ್ತಾರೆ.

ಕಡು ಬಡತನದಿಂದಾಗಿ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮಾತ್ರ ಅವರಿಗೆ ಸಾಧ್ಯವಾಯಿತು. 1 ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದರು. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡರೆ ಯಾವುದೇ ಕಾಲೇಜು ಸೀಟು ನೀಡಲಿಲ್ಲ.
ಕೊನೆಗೂ ಪೀಪಲ್ ಪಾರ್ಕ್ ಸರ್ಕಾರಿ ಕಾಲೇಜಿನಲ್ಲಿ ಸೀಟು ಪಡೆದ ಅವರು, ಪಿಯುಸಿ ಮುಗಿಸಿದರು. ಆಗ ಸೀಟು ಪಡೆಯಲು ಕಷ್ಟ ಪಟ್ಟಿದ್ದ ಹುಡುಗಿ ಈಗ 12 ಪದಕಗಳೊಂದಿಗೆ ಚಿನ್ನದ ಹುಡುಗಿಯಾಗಿದ್ದಾರೆ. ಐಎಎಸ್ ಅಧಿಕಾರಿ ಆಗುವ ಕನಸನ್ನು ವನಿತಾ ಅವರು ಹೊಂದಿದ್ದಾರೆ.












Click it and Unblock the Notifications