ಲೋಕಸಭಾ ಚುನಾವಣೆಗೂ ಪರಮೇಶ್ವರದೇ ನಾಯಕತ್ವ
ಬೆಂಗಳೂರು, ಜುಲೈ4: ರಾಜ್ಯ ಉಸ್ತುವಾರಿಯಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ರಾಜ್ಯ ಕಾಂಗ್ರೆಸ್ ಬಗ್ಗೆ ಒಂದಷ್ಟು ಸ್ಪಷ್ಟ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಮೊದಲನೆಯದಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಅಧಿಕಾರದಲ್ಲಿ ಎಂಬ ಭಾವನೆ ಮೂಡಿಸುತ್ತಾ ಸಿಎಂ ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಲು ಸಮನ್ವಯ ಸಮಿತಿ ರಚಿಸಿದ್ದಾರೆ. ಇನ್ನು, ತಮ್ಮ ಮೇಲೆ ವಶೀಕರಣ ನಡೆಸಿ ಸಚಿವ ಸ್ಥಾನ ಸೇರಿದಂತೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುವವರಿಗೆ ರೆಡ್ ಸಿಗ್ನಲ್ ತೋರುತ್ತಾ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಡಿಗ್ಗಿ ಎಂದೇ ಖ್ಯಾತರಾಗಿರುವ ದಿಗ್ವಿಜಯ್ ಸಿಂಗ್ ಅವರು ಲೋಕಸಭೆ ಚುನಾವಣೆಯತ್ತ ಚಿತ್ತ ಹರಿಸುವಂತೆ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ. ಮತ್ತು ಇದಕ್ಕಾಗಿ ಡಾ. ಜಿ ಪರಮೇಶ್ವರ್ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂಬ ಬೇಡಿಕೆ ತೀವ್ರವಾದಾಗ ಮುಜುಗರದಿಂದ ತಪ್ಪಿಸಿಕೊಳ್ಳಲು ಮುಂದಿನ ಲೋಕಸಭೆ ಚುನಾವಣೆಯನ್ನು ಪರಮೇಶ್ವರ್ ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.
ಪರಮೇಶ್ವರ್ ಅವರಿಗೆ ಉತ್ತಮ ಸಂಘಟನಾ ಚಾತುರ್ಯವಿದೆ. ಮೊನ್ನೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿರುವುದೇ ಅದಕ್ಕೆ ಉತ್ತಮ ಉದಾಹರಣೆ. ಹಾಗಾಗಿ ಅವರ ಸಾಮರ್ಥ್ಯವನ್ನು ಪಕ್ಷ ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹಾಗಾಗಿ ಕರ್ನಾಟಕ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಯನ್ನು ಅವರ ಸಾರಥ್ಯದಲ್ಲೇ ಎದುರಿಸಲಿದೆ ಎಂದು ಡಿಗ್ಗಿ ಸ್ಪಷ್ಟಪಡಿಸಿದರು.












Click it and Unblock the Notifications