ಉತ್ತರಾಖಂಡದಲ್ಲಿ ಮತ್ತೆ ಮಳೆಯ ಎಚ್ಚರಿಕೆ
ನವದೆಹಲಿ, ಜು.2 :ಮೇಘಸ್ಫೋಟದಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಉತ್ತರಾಖಂಡ ರಾಜ್ಯದ ಮೇಲೆ ವರುಣದೇವನ ದೃಷ್ಠಿ ಮತ್ತೆ ಬಿದ್ದಿದೆ. ರಾಜ್ಯದ ಪರ್ವತ ಪ್ರದೇಶಗಳಲ್ಲಿ ಈ ವಾರ ಮತ್ತಷ್ಟು ಮಳೆ ಬೀಳುವ ಸಂಭವವಿದೆ ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ.
ಜೂನ್ ತಿಂಗಳ 16 ಮತ್ತು 17ರಂದು ಸುರಿದಂತೆ ಭಾರೀ ಮಳೆ ಸುರಿಯದಿದ್ದರೂ 70ರಿಂದ 130 ಮಿ.ಮೀ ಮಳೆ ಬೀಳಲಿದೆ ಎಂದು ಉತ್ತರಾಖಂಡ ರಾಜ್ಯಕ್ಕೆ ಮಾಹಿತಿ ರವಾನಿಸಲಾಗಿದೆ. ಸಂತ್ರಸ್ತರ ರಕ್ಷಣಾ ಕಾರ್ಯ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕೆ ನೀಡಲಾಗಿದೆ.
ದೆಹಲಿಯ ಪ್ರಾದೇಶಿಕ ಹವಾಮಾನ ಕೇಂದ್ರ ಈ ಮಾಹಿತಿಯನ್ನು ನೀಡಿದ್ದು, ಉತ್ತರಾಖಂಡ ಮಾತ್ರವಲ್ಲದೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜು.4ರಿಂದ 7ವರೆಗೆ ಮಳೆ ಬೀಳಲಿದೆ ಎಂಬ ಮುನ್ನೆಚ್ಚರಿಕೆ ನೀಡಲಾಗಿದೆ.
ಮಳೆಯ ಕೇಂದ್ರ ಬಿಂದು ಉತ್ತರಾಖಂಡವಾಗಿದ್ದರೂ, ರಾಜ್ಯದ ಪರ್ವತ ಪ್ರದೇಶಗಳಲ್ಲಿ ಮಾತ್ರ ಹೆಚ್ಚಿನ ಮಳೆಯಾಗಲಿದೆ. ಆದ್ದರಿಂದ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರಕ್ಕೆ ಹವಾಮಾನ ಇಲಾಖೆ ಸೂಚಿಸಿದೆ. ಇಂದಿನ ಉತ್ತರಾಖಂಡದ ಪರಿಸ್ಥಿತಿ ಹೇಗಿದೆ ನೋಡೋಣ ಬನ್ನಿ.

ಈ ವಾರಾಂತ್ಯದಲ್ಲಿ ಮತ್ತೆ ಮಳೆ
ನವದೆಹಲಿಯ ಪ್ರಾದೇಶಿಕ ಹವಾಮಾನ ಕೇಂದ್ರ ಉತ್ತರಾಖಂಡ ರಾಜ್ಯದಲ್ಲಿ ಈ ವಾರಾಂತ್ಯದ ಜು.4ರಿಂದ 7ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರ ಪ್ರಮಾಣ 70 ರಿಂದ 130 ಮಿ.ಮೀ ಇರಬಹದು ಎಂದು ಎಚ್ಚರಿಕೆ ನೀಡಿದೆ.

ಮೇಘಸ್ಫೋಟ ಸಾಧ್ಯತೆ ಕಡಿಮೆ
ರಾಜ್ಯದಲ್ಲಿ ಜೂ.16 ಮತ್ತು 17ರಂದು ಮೇಘಸ್ಪೋಟ ಉಂಟಾಗಿ ಸರಾಸರಿ 300 ಮಿ.ಮೀ ಮಳೆ ಸುರಿದಿತ್ತು. ಆದರೆ, ಈ ಬಾರಿ ಮೇಘಸ್ಪೋಟವಾಗುವ ಸಾಧ್ಯತೆ ಕಡಿಮೆ ಇದ್ದರೂ, ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

ಪರ್ವತ ಪ್ರದೇಶಗಳಲ್ಲಿ ಹೆಚ್ಚು ಮಳೆ
ಉತ್ತರಖಂಡ ರಾಜ್ಯ ಮಳೆಯ ಕೇಂದ್ರ ಬಿಂದುವಾದರೂ, ರಾಜ್ಯದ ಪರ್ವತ ಪ್ರದೇಶಗಳಲ್ಲಿ ಈ ಬಾರಿ ಮಳೆ ಬೀಳಲಿದೆ. ಕಳೆದ ತಿಂಗಳು ಮಳೆ ಸುರಿದ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಲಿದೆ ಎಂದು ಮಾಹಿತಿ ರವಾನಿಸಿದೆ.

ಬೇರೆ ರಾಜ್ಯಗಳಿಗೂ ಎಚ್ಚರಿಕೆ
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕೇವಲ ಉತ್ತರಾಖಂಡ ಮಾತ್ರವಲ್ಲದೇ, ಉತ್ತರ ಭಾರತದ ರಾಜ್ಯಗಳಾದ ನವದೆಹಲಿ, ಪಂಜಾಬ್, ಹರ್ಯಾಣ, ಜಮ್ಮ ಮತ್ತು ಕಾಶ್ಮೀರದಲ್ಲೂ ಮಳೆಯಾಗಲಿದೆ. ದೆಹಲಿಯಲ್ಲಿ 30ರಿಂದ 40 ಮಿ.ಮೀ ಮಳೆ ಬೀಳಲಿದೆ.

ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಬಹುತೇಕ ಪೂರ್ಣ
ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಐವತ್ತು ಹೆಚ್ಚು ಮಂದಿ ಕರ್ನಾಟಕದ ಯಾತ್ರಾರ್ಥಿಗಳು ಮಂಗಳವಾರ ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ. ರಾಜ್ಯದ 15ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರಾಖಂಡ್ ನಲ್ಲಿ ಕಾಣೆಯಾದವರೆಷ್ಟು
ಉತ್ತರಾಖಂಡ್ ಪ್ರವಾಹದಲ್ಲಿ ಕಾಣೆಯಾದವರೆಷ್ಟು ಎಂಬ ಬಗ್ಗೆ ಗೊಂದಲ ಮುಂದುವರೆದಿದೆ. ಉತ್ತರಾಖಂಡ್ ಸರ್ಕಾರ ಸುಮಾರು 3,500 ಜನರು ಕಾಣೆಯಾಗಿರಬಹುದು ಎಂದು ಅಂದಾಜಿಸಿದೆ. ಆದರೆ, ಅಮೆರಿಕಾದ ಸಂಸ್ಥೆಯೊಂದು 11 ಸಾವಿರ ಜನರು ಕಾಣೆಯಾಗಿದ್ದಾರೆ ಎಂದು ಹೇಳಿದೆ. ಸ್ಥಳೀಯ ಎನ್ ಜಿಒ ಮತ್ತು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಎಫ್ಐಆರ್ ಆಧಾರದ ಮೇಲೆ ಈ ಕುರಿತು ಮಾಹಿತಿ ನೀಡಲಾಗಿದೆ.

ಎಷ್ಟು ಜನರನ್ನು ರಕ್ಷಿಸಲಾಗಿದೆ
ಭಾನುವಾರ ಉತ್ತರಾಖಂಡದಲ್ಲಿ ಸೇನಾಪಡೆಯವರು ರಕ್ಷಿಸಿದ 1,350 ಜನರು ಸೇರಿದಂತೆ ಇದುವರೆಗೂ 1,08,253 ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ಇದುವರೆಗೂ 3,500 ಜನರನ್ನು ಪತ್ತೆ ಹಚ್ಚಬೇಕಾಗಿದೆ.

ಮಂಡ್ಯ ಮತ್ತು ಮದ್ದೂರಿನ 16 ಜನ ನಾಪತ್ತೆ
ಮಂಡ್ಯ ಮತ್ತು ಮದ್ದೂರುಗಳಿಂದ ಉತ್ತರಾಖಂಡ ಪ್ರವಾಸಕ್ಕೆ ಹೋಗಿದ್ದ 16 ಜನರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾಪತ್ತೆಯಾದವರ ಕುರಿತು ಸರ್ಕಾರದ ಅಧಿಕಾರಿಗಳು ಉತ್ತರಾಖಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶೀಘ್ರವೇ ಅವರು ಪತ್ತೆಯಾಗಬಹುದು ಎಂದು ಸಿಎಂ ಹೇಳಿದ್ದಾರೆ.












Click it and Unblock the Notifications