ಯಡಿಯೂರಪ್ಪ ಅಸಹಾಯಕ; ಧನಂಜಯ ಕುಮಾರ್ ವಿದೂಷಕ

ಈ ಮಧ್ಯೆ, ಧನಂಜಯ ಕುಮಾರ್ ಒಬ್ಬ ವಿದೂಷಕ. ಕೆಜೆಪಿಯಲ್ಲೇ ಅವರ ಮಾತಿಗೆ ಬೆಲೆ ಇಲ್ಲ. ಬಿಜೆಪಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಧನಂಜಯ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಡಿಯೂರಪ್ಪನವರ ಶಕ್ತಿ, ಸಾಮರ್ಥ್ಯ ಏನೆಂಬುದು ಗೊತ್ತಿದೆ. ಆದರೆ ಇದೀಗ ಅವರು ಅಸಹಾಯಕರಾಗಿದ್ದಾರೆ ಎಂಬುದು ಸಾಬೀತಾಗಿದ್ದು, ಒಂಟಿಯಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ. ಹೀಗಾಗಿ ಸಂಜೆ ಕಳೆಯುವುದರೊಳಗೆ ಸಂತೆ ಮುಗಿಸಬೇಕೆಂಬ ಯೋಚನೆಯಲ್ಲಿ ದಿನಕ್ಕೊಂದು ಹೇಳಿಕೆ ಕೊಡಿಸಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸುವ ರಾಜಕೀಯ ತಂತ್ರ ಮಾಡುತ್ತಿದ್ದಾರೆ ಎಂದು ಆಯನೂರು ವ್ಯಾಖ್ಯಾನಿಸಿದ್ದಾರೆ.
ಪಕ್ಷದ ಶಿವಮೊಗ್ಗ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜತೆ ಮೈತ್ರಿಗೆ ಕೆಜೆಪಿ ಸಿದ್ಧವಿದೆ ಎಂಬ ಧನಂಜಯ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಜೆಪಿಯಲ್ಲಿ ಧನಂಜಯಕುಮಾರ್ ಒಬ್ಬ ವಿದೂಷಕನಂತಿದ್ದು, ದಿನಕ್ಕೊಂದು ರೀತಿ ಹೇಳಿಕೆ ನೀಡುವ ಅವರ ಮಾತಿಗೆ ಆ ಪಕ್ಷದಲ್ಲೇ ಬೆಲೆ ಇಲ್ಲ ಎಂದು ಆಯನೂರು ಲೇವಡಿ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೆಜೆಪಿ ಆತಂಕಕ್ಕೆ ಒಳಗಾಗಿದೆ. ಈ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಯಾವುದಾದರೊಂದು ಪಕ್ಷದ ಜತೆ ಮೈತ್ರಿಗೆ ಮುಂದಾಗಿದೆ ಎಂದು ಟೀಕಿಸಿದರು.
ಬಿಜೆಪಿಯನ್ನು ಮುಗಿಸುವುದಾಗಿ ಹೇಳುತ್ತಿದ್ದ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಈಗ ನಿತ್ಯ ಒಂದೊಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಸಂಘಟನೆ ಎಂಬ ಭದ್ರ ಕೋಟೆ ಇಲ್ಲದಿದ್ದರೆ ಎಂತಹ ಪರಿಸ್ಥಿತಿ ಬರುತ್ತದೆ ಎಂಬುದಕ್ಕೆ ಯಡಿಯೂರಪ್ಪ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.












Click it and Unblock the Notifications