ಕೇದಾರನಾಥನ ರುದ್ರನರ್ತನ: 5 ಕೋಟಿ ನೆರವು
ಡೆಹ್ರಾಡೂನ್, ಜೂನ್ 22: ಹಿಮಾಲಯ ಸುನಾಮಿ ಕಂಡ ಉತ್ತರಾಖಂಡ ರಾಜ್ಯದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿರುವ ಕರ್ನಾಟಕ ಸರಕಾರ ಈಗಾಗಲೇ ಸಂತ್ರಸ್ತ ಸ್ಥಳಗಳಿಗೆ ಜನರ ಸಹಾಯವನ್ನು ಕಳುಹಿಸಿದೆ.
ರಾಜ್ಯದ ಯಾತ್ರಿಕರ ಆರೋಗ್ಯ ರಕ್ಷಣೆಗಾಗಿ ಶುಶ್ರೂಷಕರು ಹಾಗೂ ತಜ್ಞ ವೈದ್ಯರನ್ನೊಳಗೊಂಡ ಮೂರು ತಂಡಗಳು ಹಾನಿಗೀಡಾದ ಸ್ಥಳಗಳಿಗೆ ತೆರಳಿವೆ. ಈ ತಂಡಗಳು ಜೂನ್ 30 ರವರೆಗೆ ಅಲ್ಲೇ ವಾಸ್ತವ್ಯ ಹೂಡಲಿದ್ದು ಋಷಿಕೇಷ್, ರುದ್ರಪ್ರಯಾಗ್, ಡೆಹ್ರಾಡೂನ್ ಸೇರಿದಂತೆ ತುರ್ತು ಅಗತ್ಯ ಇರುವ ಕಡೆ ನಿಯೋಜನೆಗೊಳ್ಳಲಿವೆ.

ನೆರವಿಗೆ ಧಾವಿಸಿದ ಸಚಿವ ಸಂತೋಷ್ ಲಾಡ್:::
ಈ ಮಧ್ಯೆ, ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಶುಕ್ರವಾರ ಬೆಳಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಕರ್ನಾಟಕ ಸರ್ಕಾರದ ಪರವಾಗಿ 5 ಕೋಟಿ ರೂ. ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ನಂತರ ವಿಪತ್ತು ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿರುವ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದರು. ಬಳಿಕ ಸಚಿವ ಸಂತೋಷ್ ಲಾಡ್ ಅವರು ಹೃಷಿಕೇಶಕ್ಕೂ ಭೇಟಿ ನೀಡಿ ತಾತ್ಕಾಲಿಕ ಶಿಬಿರಗಳಲ್ಲಿನ ಪರಿಹಾರ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಸಿಲುಕಿಕೊಂಡಿದ್ದ ಕೇದಾರನಾಥದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಸಂಜೆ ಗೌರಿಕುಂಡ್ ಹಾಗೂ ರಾಮಬಾಡ್ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಇದಾದ ನಂತರ ಬದರೀನಾಥ್ ಕಡೆ ಸೇನಾಪಡೆ ರವಾನೆಯಾಗಲಿದೆ. ಇಲ್ಲಿಯವರೆಗೆ 250 ಯಾತ್ರಿಕರು ಡೆಹ್ರಾಡೂನ್ ನಲ್ಲಿರುವ ರಾಜ್ಯದ ನಿರ್ವಹಣಾ ಕೇಂದ್ರ ಸಂಪರ್ಕಿಸಿ ತಾವು ಸಿಲುಕಿಹಾಕಿಕೊಂಡಿರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧಾರದ ಮೇಲೆ ಕರ್ನಾಟಕದ ಯಾತ್ರಿಕರನ್ನು ಡೆಹ್ರಾಡೂನ್ ಅಥವಾ ಹೃಷಿಕೇಶಕ್ಕೆ ತಂದು ಬಿಡುವಂತೆ ಸೇನಾ ಪಡೆಗೆ ಮನವಿ ಮಾಡಲಾಗಿದ್ದು, ರಾಜ್ಯದ ಯಾತ್ರಿಕರಿಗಾಗಿ ಎರಡೂ ಕಡೆ ತಾತ್ಕಾಲಿಕ ವಸತಿ ಮತ್ತು ಆರೋಗ್ಯ ಶಿಬಿರ ಸ್ಥಾಪಿಸಲಾಗಿದೆ.












Click it and Unblock the Notifications