ಯಡಿಯೂರಪ್ಪ ಮರುಸೇರ್ಪಡೆಗೆ ಬಿಜೆಪಿ ತಣ್ಣೀರು

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಅನ್ಯ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಬಿಜೆಪಿ ಹೇಳಿದ್ದು, ಕೆಜೆಪಿಯೊಡನೆಯ ಮೈತ್ರಿಯನ್ನು ತಿರಸ್ಕರಿಸಿದೆ. ಈ ನಿರ್ಧಾರದಿಂದಾಗಿ ಬಿಜೆಪಿ ಮತ್ತು ಕೆಜೆಪಿಯಲ್ಲಿನ ಹಲವಾರು ನಾಯಕರ ಆಸೆ ನಿರಾಸೆಯಾಗಿದೆ.
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಘುನಾಥ ರಾವ್ ಮಲ್ಕಾಪುರೆ ಅವರು, "ವಿಲೀನದ ಕುರಿತು ಧನಂಜಯ್ ಕುಮಾರ್ ಅವರು ಹೇಳಿಕೆ ನೀಡಿದ ನಂತರ ಮತ್ತು ಹೇಳಿಕೆ ನೀಡುವ ಮುನ್ನ ಬಿಜೆಪಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆಯನ್ನೂ ನಡೆಸಿಲ್ಲ" ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿದರೆ ಬಿಜೆಪಿ ಮತ್ತು ಕೆಜೆಪಿ ಒಂದಾಗಲಿವೆ ಎಂದು ಧನಂಜಯ್ ಕುಮಾರ್ ಅವರು ಹೇಳಿಕೆ ನೀಡಿ ಅಚ್ಚರಿ ಉಂಟುಮಾಡಿದ್ದರು. ಅಲ್ಲದೆ, ನಾಗಪುರದಲ್ಲಿ ಕೆಜೆಪಿ ಮತ್ತು ಬಿಜೆಪಿ ವಿಲೀನಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಜೊತೆಗೆ, ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದರೆ ಸುಸ್ವಾಗತ ಎಂದು ಹಲವಾರು ಬಿಜೆಪಿಗರು ತಳಿರುತೋರಣ ಕಟ್ಟಲು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದ ಗೌಡ ಅವರು ಯಡಿಯೂರಪ್ಪ ಬಿಜೆಪಿ ಪಕ್ಷದೊಳಗೆ ಬರಲು ಹಸಿರು ನಿಶಾನೆ ತೋರಿದ್ದರು. ಉಮೇಶ್ ಕತ್ತಿ, ಗೋ ಮಧುಸೂಧನರಂಥವರು ತೆರೆಮರೆಯಲ್ಲಿಯೇ ಪ್ರಯತ್ನ ನಡೆಸಿದ್ದರು. ಮುಂದಿನ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸಲು ಯಡಿಯೂರಪ್ಪನವರ ನಾಯಕತ್ವದ ಅಗತ್ಯವಿದೆ ಎಂಬ ಮಾತು ಕೂಡ ಕೇಳಿಬಂದಿತ್ತು.
ಈಗ ಆ ಎಲ್ಲ ಪ್ರಯತ್ನಗಳು ಮಣ್ಣುಪಾಲಾಗುವ ಸೂಚನೆಗಳು ಕಂಡುಬಂದಿವೆ. ಬಿಜೆಪಿ ಹೈಕಮಾಂಡ್ ಬಿಜೆಪಿ ಮತ್ತು ಕೆಜೆಪಿ ಮೈತ್ರಿಕೂಟಕ್ಕೆ ಅಂತಹ ಉತ್ಸಾಹ ತೋರುತ್ತಿಲ್ಲ. ಈ ಕುರಿತಂತೆ ಯಾವುದೇ ನಾಯಕರು ಬಹಿರಂಗ ಹೇಳಿಕೆ ನೀಡಬಾರದೆಂದು ತಾಕೀತು ಮಾಡಲಾಗಿದೆ. ಯಾರಾದರೂ ಹೇಳಿಕೆ ನೀಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾದ್ಯಕ್ಷ ಪ್ರಹ್ಲಾದ್ ಜೋಶಿ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications