ಪೋಷಕರೆ ಎಚ್ಚರ : ಶಾಲಾ ಕ್ಯಾಬ್ ಮುಷ್ಕರ ಮುಂದುವರಿಕೆ

ಗುರುವಾರ ಬೆಳಿಗ್ಗೆ ಎಂದಿನಂತೆ ಶಾಲಾ ವಾಹನಕ್ಕಾಗಿ ಕಾಯುತ್ತಿದ್ದ ಮಕ್ಕಳು ಹಾಗೂ ಪೋಷಕರು ವಾಹನ ಬಾರದೆ ಪರದಾಡಿದರು. ಪೋಷಕರೇ ಮಕ್ಕಳನ್ನು ಶಾಲೆಗೆ ಕರೆತಂದ ಕಾರಣ ಶಾಲೆ ಸುತ್ತಮುತ್ತ ವಾಹನಗಳದ್ದೇ ಕಾರುಬಾರು. ನಡೆದು ಬರುವ ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಮಾಹಿತಿ ಕೊರತೆ: ಹಲವಾರು ಶಾಲೆಗಳು ಪೋಷಕರಿಗೆ ಎಸ್ಎಂಎಸ್ ಮಾಡಿ ಶಾಲಾ ವಾಹನ ಅಲಭ್ಯತೆ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದವು. ಆದರೆ, ಇನ್ನೂ ಕೆಲವು ಶಾಲೆಗಳು ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಗೊಂದಲ ಮುಂದುವರೆದಿತ್ತು.
ಹೀಗಾಗಿ, ಪೋಷಕರು ಬಲವಂತವಾಗಿ ತಮ್ಮ ಕಚೇರಿಗಳಿಗೆ ರಜೆ ಹಾಕಬೇಕಾಯಿತು. ಕೆಲವು ವರ್ಕ್ ಫ್ರಂ ಹೋಮ್ ವ್ಯವಸ್ಥೆ ಬಳಸಿದರೆ ಇನ್ನೂ ಕೆಲವರು ಕಚೇರಿಗೆ ಅರ್ಧ ದಿನ ತಡವಾಗಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಶಾಲಾ ವಾಹನ ಇಲ್ಲದೆ ಹಲವು ಮಕ್ಕಳು ತಡವಾಗಿ ಶಾಲೆಗೆ ಬರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಇದೇ ಮೊದಲ ಬಾರಿಗೆ ಖಾಸಗಿ ಶಾಲೆಗಳಲ್ಲಿ ತಡವಾಗಿ ಬಂದರೂ ಪ್ರವೇಶಕ್ಕೆ ಅನುಮತಿ ಸಿಕ್ಕಿತ್ತು. ಅನೇಕ ಶಾಲೆಗಳ ಬಸ್, ವ್ಯಾನ್, ಕ್ಯಾಬ್ ಗಳು ನಿಂತಲ್ಲೇ ನಿಂತಿದ್ದರೆ, ದೆಹಲಿ ಪಬ್ಲಿಕ್ ಶಾಲೆ ಬಸ್ ಮಾತ್ರ ಸಂಜೆ ನಾಲ್ಕರ ವೇಳೆಗೆ ಬಸವನಗುಡಿ ಕೃಷ್ಣರಾವ್ ಪಾರ್ಕ್ ಬಳಿ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.
ಏನಿದು ಸಮಸ್ಯೆ: ಹಲವು ಶಾಲೆಗಳು ವಿದ್ಯಾರ್ಥಿಗಳನ್ನು ಕರೆತರಲು ಖಾಸಗಿ ವಾಹನಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದಿವೆ. ಹೊಸ ನಿಯಮಗಳನ್ನು ಖಂಡಿಸಿ ಖಾಸಗಿ ಶಾಲಾವಾಹನಗಳ ಚಾಲಕರು, ಮಾಲೀಕರು ಇಂದಿನಿಂದ 3 ದಿನ ಮುಷ್ಕರ ಕೈಗೊಂಡಿದ್ದಾರೆ.
ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರಲು 15 ವರ್ಷಕ್ಕಿಂತ ಹಳೆಯ ವಾಹನ ಬಳಸಬಾರದು, ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ವಾಹನಕ್ಕೆ ಹತ್ತಿಸಬಾರದು ಎಂಬುದು ಸೇರಿದಂತೆ ಕೆಲವು ಹೊಸ ನಿಯಮಗಳನ್ನು ಪೊಲೀಸ್ ಹಾಗೂ ಆರ್ ಟಿಒ ಅಧಿಕಾರಿಗಳು ಜಾರಿಗೆ ತಂದಿದ್ದಾರೆ.
ಹೊಸ ವಾಹನ ಖರೀದಿಸಲು ದುಬಾರಿ ವೆಚ್ಚವಾಗುತ್ತದೆ. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಚಾಲಕರು ಹಾಗೂ ಮಾಲೀಕರು ಅಗ್ರಹಿಸಿದ್ದಾರೆ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಶಾಲಾ ಮಕ್ಕಳನ್ನು ಕರೆತರುವ ವಾಹನಗಳವರು ಸದುಪಯೋಗ ಮಾಡಿಕೊಂಡಿಲ್ಲ. ಹೀಗಾಗಿ ಶಿಸ್ತುಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಹಾಗೂ ಆರ್ ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
ಸಂಧಾನ ವಿಫಲ: ಖಾಸಗಿ ಶಾಲೆಗಳ ವಾಹನ ಚಾಲಕರೊಂದಿಗೆ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ನಡೆಸಿದ ಸಂಧಾನ ಮಾತುಕತೆ ಕೂಡಾ ಮುರಿದು ಬಿದ್ದಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ಮಾತುಕತೆಗೆ ಯತ್ನಿಸಲಾಗುತ್ತಿದೆ. ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರೆಯಲಿದೆ ಎಂದು ವಾಹನಗಳ ಯೂನಿಯನ್ ಅಧ್ಯಕ್ಷ ಟಿಎಸ್ ಷಣ್ಮುಗಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 16,000 ಕ್ಕೂ ಅಧಿಕ ವಾಹನಗಳು, ಅಟೋರಿಕ್ಷಾಗಳು ಮುಷ್ಕರದ ಭಾಗವಾಗಿವೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ಸರ್ಕಾರ ಸಿದ್ಧಪಡಿಸಿದೆ ಮತ್ತು ಮೇ 1ರಿಂದ ಅದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ ಎಂಬ ಪೊಲೀಸರ ವಾದವನ್ನು ಚಾಲಕರು ಒಪ್ಪುತ್ತಿಲ್ಲ. ಆದ್ದರಿಂದ ಪ್ರತಿಭಟನೆ ಮುಂದುವರೆದಿದೆ.












Click it and Unblock the Notifications