ಹೊಸ ಬಾರ್, ವೈನ್ ಶಾಪ್ ಗೆ ಓಕೆ ಎಂದ ಸಿಎಂ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಅದರಲ್ಲೂ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಮುಂದಾಗಿದೆ.
ಆದ್ದರಿಂದ ಹೊಸ ವೈನ್ ಶಾಪ್ ಹಾಗೂ ಬಾರ್ ಗಳನ್ನು ಸ್ಥಾಪಿಸಲು ಸರ್ಕಾರ ಶೀಘ್ರದಲ್ಲೇ ಅನುಮತಿ ನೀಡಲಿದೆ ಎಂದು ಹೇಳಿದರು. ಇದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳುತ್ತೇವೆ ಎಂದು ಸಿಎಂ ಸಮರ್ಥನೆ ನೀಡಿದರು.
ಹಿಂದಿನ ಸರ್ಕಾರ ಸಾರ್ವಜನಿಕರ ತೀವ್ರ ವಿರೋಧದಿಂದಾಗಿ, ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ನಿರಾಕರಿಸಿತ್ತು. ಆದ್ದರಿಂದ 1997ರಿಂದ ಇದುವರೆಗೂ ಹೊಸ ವೈನ್ ಶಾಪ್‌ಗಳನ್ನು ತೆರೆಯಲು ಅನುಮತಿ ನೀಡಿಲ್ಲ. (ಹೊಸ ಬಾರ್ ಗೆ ಅನುಮತಿ ಇಲ್ಲವೇ ಇಲ್ಲ ಸಚಿವರು)
ಕೆಲವು ದಿನಗಳ ಹಿಂದೆ ಹೊಸ ಬಾರ್ ಮತ್ತು ವೈನ್ ಶಾಪ್ ಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ, ಸಿಎಂ ರಾಜ್ಯದಲ್ಲಿ 1000ಕ್ಕೂ ಅಧಿಕ ವೈನ್ ಶಾಪ್‌ಗಳಿಗೆ ಅನುಮತಿ ನೀಡುವುದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಪಕ್ಷದವರೇ ವಿರೋಧ : ಸಿಎಂ ಸಿದ್ದರಾಮಯ್ಯ ಘೋಷಿಸಿದ ಅಗ್ಗದ ಮದ್ಯ ತಯಾರಿಕೆ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾನಾಯ್ಡು ಸರ್ಕಾರದ ತೀರ್ಮಾನವನ್ನು ವಿರೋಧಿಸಿದ್ದರು.
ಈ ಯೋಜನೆ ಕುರಿತು ವ್ಯಾಪಕ ಟೀಕೆ ಕೇಳಿಬಂದಿದ್ದರಿಂದ ಯೋಜನೆಯನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದರು. ಆದರೆ, ಈಗ ಹೊಸ ಮದ್ಯದಂಗಡಿ ತೆರೆಯಲು ಅನುಮತಿ ನೀಡುವುದಾಗಿ ಹೇಳಿ ಸಿದ್ದರಾಮಯ್ಯ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದಂತೆ ಕಾಣುತ್ತಿದೆ.












Click it and Unblock the Notifications